ಹೊಸ ರೈಲು ಪ್ರತಿದಿನ ಶೀಘ್ರದಲ್ಲೇ

<ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ಚಾಲನೆ ನೀಡಿ ಸಂಸದ ನಳಿನ್ ಭರವಸೆ>

ಮಂಗಳೂರು: ಮಂಗಳೂರು ಸೆಂಟ್ರಲ್- ಯಶವಂತಪುರ (ಬೆಂಗಳೂರು) ನಡುವೆ ವಾರದಲ್ಲಿ ಮೂರು ದಿನ ಸಂಚರಿಸಲಿರುವ ಹೊಸ ರಾತ್ರಿ ರೈಲು ಆರಂಭದ ಮೂಲಕ ಕರಾವಳಿ ಭಾಗದ ಜನರ ಬಹುಕಾಲದ ಕನಸು ನನಸಾಗುತ್ತಿದೆ. ಈ ರೈಲು ಮಾರ್ಚ್ ಬಳಿಕ ಪ್ರತಿದಿನ ಓಡಾಟ ನಡೆಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಹೊಸ ರೈಲಿಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಕುಂಭಮೇಳ ನಡೆಯುವ ಪ್ರದೇಶ ಮಾರ್ಗದಲ್ಲಿ ಹೆಚ್ಚಿನ ರೈಲು ಬೋಗಿಗಳು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಈ ಮಾರ್ಗದಲ್ಲಿ ದಿನಂಪ್ರತಿ ರೈಲು ಆರಂಭಿಸಲಾಗಿಲ್ಲ. ಮುಂದಿನ ರೈಲ್ವೆ ವೇಳಾಪಟ್ಟಿ ಸಿದ್ಧಪಡಿಸುವ ಸಂದರ್ಭ ದಿನಂಪ್ರತಿ ಓಡಾಟ ಹಾಗೂ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವಂತೆ ಹೊಸ ರೈಲಿನ ವೇಳಾಪಟ್ಟಿ ಪರಿಷ್ಕರಣೆಗೆ ಇಲಾಖೆ ಹಿರಿಯ ಅಧಿಕಾರಿಗಳು ಸಿದ್ಧರಿದ್ದಾರೆ ಎಂದು ಹೇಳಿದರು.

ಇನ್ನಷ್ಟು ರೈಲು: ತಿರುಪತಿ- ಹಾಸನ ರೈಲು ಮಂಗಳೂರಿಗೆ ವಿಸ್ತರಣೆ, ಗೋವಾ- ಮಂಗಳೂರು ಹಗಲು ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಬೆಂಗಳೂರು- ಗೋವಾ ಜನಶತಾಬ್ದಿ ರೈಲು ಮಂಗಳೂರಿಗೆ ವಿಸ್ತರಣೆ ನಡೆಸಬೇಕು ಎಂದು ತಾನು ಮುಂದಿಟ್ಟಿರುವ ಬೇಡಿಕೆಗೆ ಕೇಂದ್ರ ರೈಲ್ವೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ನಳಿನ್ ಹೇಳಿದರು.

ಸ್ವಾತಂತ್ರಾೃ ನಂತರ ಆಮೆ ನಡಿಗೆಯಲ್ಲಿದ್ದ ರೈಲ್ವೆ ಇಲಾಖೆ ಕಳೆದ ಐದು ವರ್ಷಗಳಲ್ಲಿ ಕುದುರೆ ವೇಗ ಪಡೆದಿದೆ. ಕಳೆದ 10 ವರ್ಷಗಳಲ್ಲಿ ದಕ್ಷಿಣ ಕನ್ನಡಕ್ಕೆ ಇಲಾಖೆಗೆ 1,500 ಕೋಟಿ ರೂ. ಯೋಜನೆ ಬಂದಿದೆ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ್ ಕೆ., ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಹಾಯಕ ವಿಭಾಗೀಯ ಪ್ರಬಂಧಕ ಸಾಯಿಬಾಬ ಉಪಸ್ಥಿತರಿದ್ದರು. ನೈರುತ್ಯ ರೈಲ್ವೆ ವಿಭಾಗೀಯ ರೈಲ್ವೆ ಪ್ರಬಂಧಕಿ ಅಪರ್ಣಾ ಗರ್ಗ್ ಸ್ವಾಗತಿಸಿದರು.

ಮೇಲ್ಸೇತುವೆ ಕಾಮಗಾರಿಗೆ ವೇಗ: ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಜಂಟಿ ಕಾರ್ಯದರ್ಶಿ ಫೆ.26ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಸಹಿತ ಕರಾವಳಿಯ ರಾಷ್ಟ್ರೀಯ ಹೆದ್ದಾರಿ ಸಂಬಂಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದು, ಕಾಮಗಾರಿಗಳು ವೇಗ ಪಡೆದುಕೊಳ್ಳಲಿದೆ ಎಂದು ನಳಿನ್ ಹೇಳಿದರು.

ಫ್ಲಾಟ್‌ಫಾರ್ಮ್ ವಿಸ್ತರಣೆ: ಕಬಕ ಪುತ್ತೂರು ರೈಲು ನಿಲ್ದಾಣದ ನಂ.1 ಮತ್ತು 2ನೇ ಫ್ಲಾಟ್‌ಫಾರ್ಮ್ ಎತ್ತರ ಏರಿಕೆ ಹಾಗೂ ವಿಸ್ತರಣೆ, ಬಂಟ್ವಾಳ ರೈಲ್ವೆ ನಿಲ್ದಾಣದ ಎತ್ತರ ಏರಿಕೆ ಹಾಗೂ ವಿಸ್ತರಣೆ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಪಾದಚಾರಿಗಳ ಮೇಲ್ಸೇತುವೆ ಕಾಮಗಾರಿಗೆ ಸಂಸದ ನಳಿನ್ ಶಂಕುಸ್ಥಾಪನೆ ನೆರವೇರಿಸಿದರು.

ಹೊಸ ಮೀನುಗಾರಿಕೆ ಜೆಟ್ಟಿಗೆ ಮುಂದಿನ ತಿಂಗಳು ಶಿಲಾನ್ಯಾಸ: ಮಂಗಳೂರಿನಲ್ಲಿ ಹೊಸ ಮೀನುಗಾರಿಕೆ ಜೆಟ್ಟಿ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, 250 ಕೋಟಿ ರೂ. ವೆಚ್ಚದ ಯೋಜನೆಗೆ ಮುಂದಿನ ತಿಂಗಳು ಶಿಲಾನ್ಯಾಸ ನಡೆಯಲಿದೆ ಎಂದು ಸಂಸದ ನಳಿನ್ ತಿಳಿಸಿದರು. ಬಂದರು ಸಚಿವಾಲಯದಿಂದ 98.25 ಕೋಟಿ ರೂ., ಎನ್‌ಎಂಪಿಟಿಯಿಂದ 88 ಕೋಟಿ ರೂ., ರಾಜ್ಯ ಸರ್ಕಾರದಿಂದ ಒಂಭತ್ತು ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ರೈಲು ಸಂಚಾರ ದಿನ-ಸಮಯ: ಯಶವಂತಪುರ- ಮಂಗಳೂರು ಸೆಂಟ್ರಲ್(ನಂ. 16585) ರೈಲು ಪ್ರತಿ ಭಾನುವಾರ, ಮಂಗಳವಾರ, ಗುರುವಾರಗಳಂದು ಸಾಯಂಕಾಲ 4.30ಕ್ಕೆ ಹೊರಟು ಮಂಗಳೂರು ಜಂಕ್ಷನ್ 3.13, ಮಂಗಳೂರು ಸೆಂಟ್ರಲ್ 4.00 (ಬೆಳಗ್ಗೆ) ತಲುಪುತ್ತದೆ. ಮಂಗಳೂರು ಸೆಂಟ್ರಲ್- ಯಶವಂತಪುರ ಎಕ್ಸ್‌ಪ್ರೆಸ್ (ನಂ.16586) ರೈಲು ಪ್ರತಿ ಸೋಮವಾರ, ಬುಧವಾರ, ಶುಕ್ರವಾರಗಳಂದು ಸಾಯಂಕಾಲ 7 ಗಂಟೆಗೆ ಹೊರಟು ಯಶವಂತಪುರಕ್ಕೆ 5.00 (ಬೆಳಗ್ಗೆ) ತಲುಪುತ್ತದೆ.