More

  ಮಂಗಳೂರು ವಿಮಾನ ನಿಲ್ದಾಣಕ್ಕೆ ಯಾರ ಹೆಸರು?

  ಮಂಗಳೂರು: ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ಮರುನಾಮಕರಣ ಮಾಡುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿದೆ, ಅದರಲ್ಲಿ ಮಂಗಳೂರು ಕೂಡ ಸೇರಿದ್ದು, ಯಾವ ಹೆಸರು ಇರಿಸಬಹುದು ಎನ್ನುವುದು ಚರ್ಚೆಯಲ್ಲಿದೆ.
  ಕಳೆದ ಅನೇಕ ವರ್ಷಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಕೇಳಿ ಬರುತ್ತಿದ್ದವು. ಇದರಲ್ಲಿ ಮುಂಚೂಣಿಯಲ್ಲಿ ಇದ್ದುದು ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ, ದಕ್ಷಿಣ ಕನ್ನಡದ ಶಿಲ್ಪಿ ಯು.ಶ್ರೀನಿವಾಸ ಮಲ್ಯ ಹಾಗೂ ಸ್ವಾತಂತ್ರೃ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಹೆಸರುಗಳು.

  ಅನೇಕರು ಈ ಹೆಸರು ಇಡುವ ಬಗ್ಗೆ ಪತ್ರಗಳನ್ನು ಬರೆದಿದ್ದರೂ ಅದ್ಯಾವುದೂ ಇದುವರೆಗೆ ಸಮರ್ಪಕವಾದ ಪ್ರಸ್ತಾಪದ ರೂಪದಲ್ಲಿ ಸರ್ಕಾರಕ್ಕೆ ಹೋಗಿಲ್ಲ. 2014ರಲ್ಲಿ ಆಗಿನ ಸಚಿವರಾಗಿದ್ದ ಯು.ಟಿ.ಖಾದರ್ ಕೂಡ ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರಿಡುವುದಾಗಿ ಹೇಳಿದ್ದರು.
  ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಮೈಸೂರು, ಕಲಬುರಗಿ ಈ ಐದು ವಿಮಾನ ನಿಲ್ದಾಣಗಳು ಸದ್ಯ ಮರುನಾಮಕರಣದ ಪಟ್ಟಿಯಲ್ಲಿವೆ.

  ಪ್ರಕ್ರಿಯೆ ಹೇಗೆ?: ಯಾವುದೇ ಆಸಕ್ತ ಪ್ರಾಯೋಜಕರು, ಸಂಘಟಕರು ಯಾವ ಹೆಸರು ಯಾವ ಕಾರಣಕ್ಕಾಗಿ ವಿಮಾನ ನಿಲ್ದಾಣಕ್ಕೆ ಇರಿಸಬೇಕು ಎನ್ನುವುದನ್ನು ಪತ್ರ ಮೂಲಕ ವಿಮಾನ ನಿಲ್ದಾಣದ ಮುಖ್ಯಸ್ಥರಿಗೆ, ಅವರು ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು. ರಾಜ್ಯ ಸರ್ಕಾರ ಇದನ್ನು ಶಿಫಾರಸು ರೀತಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಬೇಕು.
  ಅಥವಾ ವಿಮಾನ ನಿಲ್ದಾಣವಿರುವ ಗ್ರಾಪಂ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ವಿಮಾನ ನಿಲ್ದಾಣಕ್ಕೆ ಯಾವ ಹೆಸರಿಡಬೇಕು ಎಂದು ನಿರ್ಣಯ ತೆಗೆದುಕೊಂಡು ಅದನ್ನು ಸರ್ಕಾರಕ್ಕೆ ಕಳುಹಿಸಬೇಕು.

  ಈ ಶಿಫಾರಸುಗಳನ್ನು ಕೇಂದ್ರ ವಿಮಾನಯಾನ ಸಚಿವಾಲಯ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ. ಅಥವಾ ಯಾವುದೇ ಹೆಸರು ಮಹತ್ವವೆನಿಸಿದರೆ ಕೇಂದ್ರ ಸರ್ಕಾರವೇ ಸ್ವಯಂಪ್ರೇರಣೆಯಿಂದಲೂ ನಾಮಕರಣ ಮಾಡಬಹುದು ಎನ್ನುತ್ತಾರೆ ಮಂಗಳೂರು ಮಾಜಿ ವಿಮಾನ ನಿಲ್ದಾಣ ನಿರ್ದೇಶಕ ಎಂ.ಆರ್.ವಾಸುದೇವ.

  ಮಂಗಳೂರಿನ ಸಾಧ್ಯಾಸಾಧ್ಯತೆ: ಪ್ರಸ್ತುತ ಲಭ್ಯ ಮಾಹಿತಿ ಪ್ರಕಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಯಾವುದೇ ಹೆಸರನ್ನೂ ಸರ್ಕಾರ ಈವರೆಗೆ ಶಿಫಾರಸು ಮಾಡಿಲ್ಲ. ಆದರೆ ಹೆಚ್ಚಿನ ಒತ್ತಡ ಕೇಳಿ ಬಂದಿರುವುದು ರಾಣಿ ಅಬ್ಬಕ್ಕ ಹಾಗೂ ಶ್ರೀನಿವಾಸ ಮಲ್ಯ ಅವರದ್ದು. ಈ ಬಗ್ಗೆ ಅಧಿಕೃತ ಶಿಫಾರಸು ಜಿಲ್ಲಾಡಳಿತದಿಂದ ಇನ್ನೂ ಹೋಗಿಲ್ಲ. ಮಂಗಳೂರು ವಿಮಾನ ನಿಲ್ದಾಣ ಈಗಾಗಲೇ ಅದಾನಿ ಕಂಪನಿಯ ತೆಕ್ಕೆಗೆ ಹೋಗಿರುವುದರಿಂದ ಅದಕ್ಕೆ ಸರ್ಕಾರ ನಾಮಕರಣ ಮಾಡುವ ಸಾಧ್ಯತೆ ಹೇಗೆ ಎನ್ನುವ ಬಗ್ಗೆಯೂ ಸ್ಪಷ್ಟತೆ ಇಲ್ಲ.

  ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ, ಈಗ ಈ ಬಗ್ಗೆ ಶಿಫಾರಸು ಮಾಡುವಂತೆ ಸರ್ಕಾರದಿಂದ ಪತ್ರ ಬಂದಿದೆ, ಈ ಬಗ್ಗೆ ಸಮಾಲೋಚನೆ ನಡೆಸಿ ಹೆಸರು ಕಳುಹಿಸಲಾಗುವುದು.
  – ಸಿಂಧೂ ಬಿ. ರೂಪೇಶ್, ದ.ಕ ಜಿಲ್ಲಾಧಿಕಾರಿ


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts