ಏರ್‌ಪೋರ್ಟ್ ಖಾಸಗೀಕರಣ ಆತಂಕ

«ಡಿ.10ರಂದು ಮಂಗಳೂರು ವಿಮಾನ ನಿಲ್ದಾಣ ಪಿಪಿಪಿ ಟೆಂಡರ್ ಓಪನ್ * ಏನಾಗುವುದೋ ಎಂಬ ಕಳವಳದಲ್ಲಿ ಸಿಬ್ಬಂದಿ»

– ವೇಣುವಿನೋದ್ ಕೆ.ಎಸ್. ಮಂಗಳೂರು
ಬೆಂಗಳೂರು ಸೇರಿದಂತೆ ದೇಶದ ಐದು ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಖಾಸಗಿ ಸಹಭಾಗಿತ್ವದ ವಿಮಾನ ನಿಲ್ದಾಣ ಕಾರ್ಯನಿರ್ವಹಣೆ ಯಶಸ್ವಿ ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ ಮಂಗಳೂರನ್ನೂ ಖಾಸಗಿಯವರ ಕೈಗೊಪ್ಪಿಸಲು ಮುಂದಾಗಿರುವುದು ಸಿಬ್ಬಂದಿಗಳಲ್ಲಿ ಕಳವಳ ಮೂಡಿಸಿದೆ.
ಮಂಗಳೂರು, ತಿರುವನಂತಪುರಂ, ಲಕ್ನೊ, ಜೈಪುರ, ಗುವಾಹಟಿ, ಅಹಮದಾಬಾದ್ ಈ ಆರು ಏರ್‌ಪೋರ್ಟ್‌ಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ತೆಕ್ಕೆಯಿಂದ ಕಳಚಿ ಖಾಸಗಿ ಕೈಗೊಪ್ಪಿಸುವುದಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನೂ ನೀಡಿದ್ದು, ಈ ಕುರಿತ ಟೆಂಡರ್ ಇದೇ ಡಿಸೆಂಬರ್ 10ರಂದು ತೆರೆಯಲ್ಪಡಲಿದೆ. ಆ ವೇಳೆಗೆ ಖಾಸಗೀಕರಣದ ಅಂಶಗಳೇನೇನು ಎನ್ನುವುದು ಬಹಿರಂಗಗೊಳ್ಳಲಿದೆ.

ಸುಧಾರಣೆ ಮಾಡಿ ಕೊಡಬೇಕೇ?:
ಬೆಂಗಳೂರು ವಿಮಾನ ನಿಲ್ದಾಣ ಈಗಾಗಲೇ ಖಾಸಗಿಯವರ ಕೈಯಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಯುತ್ತಿರುವ ಎಎಐ ಕೈಲ್ಲಿರುವ ಏಕೈಕ ವಿಮಾನ ನಿಲ್ದಾಣ ಮಂಗಳೂರು. ಈಗ ಅದು ಕೂಡ ಕೈತಪ್ಪಬಹುದು ಎನ್ನುವ ಭೀತಿಯಲ್ಲಿ ಸಿಬ್ಬಂದಿ ಇದ್ದಾರೆ.
ನಷ್ಟದ ಹಾದಿಯಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣವನ್ನು ಸುಧಾರಣೆಗೊಳಪಡಿಸಿ, ನಿಧಾನವಾಗಿ ಲಾಭದತ್ತ ತರಲಾಗಿದೆ. ಹೊಸ ಏರ್‌ಪೋರ್ಟ್ ಆಗಿದೆ, ರನ್ ವೇ ಮಾಡಲಾಗಿದೆ. ಸದ್ಯ 300 ಕೋಟಿ ರೂ. ವೆಚ್ಚದಲ್ಲಿ ಪ್ಯಾರಲಲ್ ಟ್ಯಾಕ್ಸಿವೇ, ಡಿಪಾರ್ಚರ್, ಅರೈವಲ್ ಹಾಲ್ ಅಭಿವೃದ್ಧಿ, ಏರೋಬ್ರಿಜ್ ಇತ್ಯಾದಿ ಕೆಲಸಗಳು ನಡೆಯುತ್ತಿದೆ. ಇದೆಲ್ಲವನ್ನೂ ನಾವು ಕಷ್ಟಪಟ್ಟು ಅಂತಿಮಗೊಳಿಸಿ ಖಾಸಗಿಯವರಿಗೆ ಕೊಡಬೇಕು ಎಂದರೆ ಹೇಗೆ ಒಪ್ಪುವುದು ಎನ್ನುತ್ತಾರೆ ಅಧಿಕಾರಿಯೊಬ್ಬರು.
ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ, ಕಳೆದ ವರ್ಷಕ್ಕಿಂತ ಈ ಬಾರಿ ವಹಿವಾಟು ಶೇ.30ರಷ್ಟು ಹೆಚ್ಚಾಗಿದೆ. ಹೀಗಿರುವಾಗ ಖಾಸಗಿಯವರಿಗೆ ಒಪ್ಪಿಸಿದರೆ ವಿಮಾನ ನಿಲ್ದಾಣ ಜನರಿಂದ ದೂರವಾಗಬಹುದು. ಈಗಿರುವ ವಿಮಾನ ನಿಲ್ದಾಣದ ಸಾಮಾನ್ಯದರಗಳು ಖಾಸಗಿಯವರ ಕೈಯಲ್ಲಿ ಹೋಗಿ ದುಬಾರಿಯಾಗಿ ಜನರಿಗೆ ಕಷ್ಟವಾಗಲಿದೆ ಎನ್ನುವುದು ಅವರ ಕಳವಳ.

ಖಾಸಗಿಯವರಿಗೂ ಕಷ್ಟ
ಸದ್ಯ ಕಣ್ಣೂರು ವಿಮಾನ ನಿಲ್ದಾಣ ಕೇರಳದಲ್ಲಿ ಪ್ರಾರಂಭಗೊಂಡಿದೆ, ಅದರೊಂದಿಗೆ ಜೆಟ್ ಏರ್‌ವೇಸ್ ದುಬೈ ಯಾನವನ್ನು ಮಂಗಳೂರಿನಿಂದ ಸದ್ಯಕ್ಕೆ ಸ್ಥಗಿತಗೊಳಿಸಿದೆ. ಹಾಗಾಗಿ ಖಾಸಗಿಯವರು ಮಂಗಳೂರು ವಿಮಾನ ನಿಲ್ದಾಣವನ್ನು ಪಡೆದರೂ ಅವರಿಗೆ ತ್ವರಿತ ಅಭಿವೃದ್ಧಿ ಸಾಧಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ನಿವೃತ್ತ ವಿಮಾನ ನಿಲ್ದಾಣ ನಿರ್ದೇಶಕ ಎಂ.ಆರ್.ವಾಸುದೇವ.
ಸಿಬ್ಬಂದಿಗೆ ಖಾಸಗೀಕರಣದಿಂದ ತೊಂದರೆ ಎಂದರೆ ಅವರನ್ನು ಬೇರೆಡೆಗೆ ವರ್ಗಾಯಿಸಬಹುದು, ಸದ್ಯ ಎಎಐ ಕೈಯಲ್ಲಿರುವ ಇತರ ಏರ್‌ಪೋರ್ಟ್ ಎಂದರೆ ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲ್ಬುರ್ಗಿ. ಇವುಗಳನ್ನಷ್ಟೇ ನೋಡಿಕೊಂಡು ಹೋಗಬೇಕು ಎನ್ನುತ್ತಾರೆ.

ಖಾಸಗೀಕರಣ ಎಂದರೆ ಹೇಗೆ?
ಸಾಮಾನ್ಯವಾಗಿ ಖಾಸಗಿಯವರಿಗೆ ವಿಮಾನ ನಿಲ್ದಾಣ ಹಸ್ತಾಂತರಿಸಿದರೆ ಏರ್‌ಟ್ರಾಫಿಕ್ ಕಂಟ್ರೋಲ್ ಮಾತ್ರವೇ ವಿಮಾನ ನಿಲ್ದಾಣಗಳ ಪ್ರಾಧಿಕಾರ-ಎಎಐ ಕೈನಲ್ಲಿ ಇರುತ್ತದೆ. ಟರ್ಮಿನಲ್ ನಿರ್ವಹಣೆ, ಪಾರ್ಕಿಂಗ್ ಇತ್ಯಾದಿಗಳೆಲ್ಲವೂ ಖಾಸಗಿಯವರಿಗೆ ಹೋಗುತ್ತದೆ.

ಮಂಗಳೂರು ಮಧ್ಯಮ ದರ್ಜೆಯ ಏರ್‌ಪೋರ್ಟ್. ಇದರಲ್ಲಿ ಬಹಳಷ್ಟು ಲಾಭ ಮಾಡುವುದು ಕಷ್ಟ. ಮ್ಯಾನೇಜಿಂಗ್ ಕೌಶಲ್ಯ ಇದ್ದರೆ ಮಾತ್ರವೇ ಸಾಧ್ಯ. ನಿಜಕ್ಕೂ ಪಿಪಿಪಿಯ ಸ್ವರೂಪ ಏನೆನ್ನುವುದು ಬಿಡ್ ಓಪನ್ ಆದ ಬಳಿಕವೇ ಗೊತ್ತಾಗಬೇಕಿದೆಯಷ್ಟೆ.
-ಎಂ.ಆರ್.ವಾಸುದೇವ, ವಿಮಾನ ನಿಲ್ದಾಣ ನಿರ್ದೇಶಕರು(ನಿವೃತ್ತ)