ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಸೋ-ಎ್ಟಿಎಸ್‌ಸಿ-1)ದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 1 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಜಿಪನಡು ಕಂಚಿನಡ್ಕ ನಿವಾಸಿ ಜಮಾಲ್ (24) ಶಿಕ್ಷೆಗೊಳಗಾದ ಅಪರಾಧಿ. ಈತ ಬೆಳ್ತಂಗಡಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ.
ಪ್ರಕರಣದ ಹಿನ್ನೆಲೆ: ಅಪ್ರಾಪ್ತ ವಿದ್ಯಾರ್ಥಿನಿ ತನ್ನ ಸಂಬಂಧಿ ಜತೆ ಬೆಳ್ತಂಗಡಿಯ ಐಟಿಐಯೊಂದಕ್ಕೆ ಕುಕ್ಕೇಡಿ ಗೋಳಿಯಂಗಡಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದಳು. 2024 ಅ.5ರಂದು ಆರೋಪಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಇದಾದ ಬಳಿಕ ಅ.10ರಂದು ಬೆಳಗ್ಗೆ 7.45ರ ಸುಮಾರಿಗೆ ಮತ್ತೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಪ್ರಾಪ್ತ ಯುವತಿ ಸೇರಿದಂತೆ ಇಬ್ಬರಿಗೂ ಬೈಕ್ ತಾಗಿಸಿಕೊಂಡು ಚಲಾಯಿಸಿದ್ದು, ‘ನಿನ್ನನ್ನು ಕಾಲೇಜು ಬಿಡಬೇಕಾ? ನಿನ್ನ ಮೊಬೈಲ್ ನಂಬರ್ ನನಗೆ ಕೊಡು’ ಎಂದು ಕೇಳಿದ್ದಾನೆ. ಅ.15ರಂದು ಬೆಳಗ್ಗೆ 7.45ಕ್ಕೆ ಮತ್ತೆ ಕುಕ್ಕೇಡಿ ಪುಲ್ಲಿಯ ಪ್ರದೇಶದಲ್ಲಿ ವಿದ್ಯಾರ್ಥಿಗಳು ತೆರಳುತ್ತಿದ್ದಾಗ ಮತ್ತೆ ಬೈಕ್‌ನಲ್ಲಿ ಬಂದು ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 12ರಡಿ ಪೋಕ್ಸೋ ಮತ್ತು ಬಿಎನ್‌ಎಸ್ 78ರಡಿ ಕೇಸು ದಾಖಲಾಗಿತ್ತು.
ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಹೆೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವಿನಯ್ ದೇವರಾಜ್ ಅವರು ಅಪರಾಧ ಸಾಬೀತುಪಡಿಸಿ ಅಪರಾಧಿಗೆ 1ವರ್ಷ ಸಾದಾ ಸಜೆ ಮತ್ತು 10ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಪರಾಧಿ ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 2 ತಿಂಗಳುಗಳ ಕಾಲ ಶಿಕ್ಷೆ ಅನುಭವಿಸಬೇಕು. ಸಂತ್ರಸ್ತ ವಿದ್ಯಾರ್ಥಿನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 1 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ವೇಣೂರು ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಶೈಲ್ ಟಿ. ಮುರಗೋಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ವಾದಿಸಿದ್ದರು.
ಬಿಎನ್‌ಎಸ್ ಕೇಸಲ್ಲಿ ಮೊದಲ ತೀರ್ಪು
ದೇಶದಲ್ಲಿ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತಾ) ಕಾನೂನು 2024ರ ಜುಲೈ 1ರಿಂದ ಜಾರಿಗೆ ಬಂದಿದ್ದು, ಈ ಕಾನೂನಿನಡಿ ನೊಂದಣಿಯಾದ ಪೋಕ್ಸೋ ಪ್ರಕರಣದ ಮೊದಲ ತೀರ್ಪು ಇದಾಗಿದೆ. 2024ರ ಅ.15ರಂದು ಪ್ರಕರಣ ದಾಖಲಾಗಿದ್ದರೆ, 2025ರ ೆ.10ಕ್ಕೆ ತೀರ್ಪು ಹೊರಬಿದ್ದಿದೆ. ಈ ಮೂಲಕ ಪೋಕ್ಸೋ ನ್ಯಾಯಾಲಯ ಬಿಎನ್‌ಎಸ್ 78ರಡಿ ಕೇವಲ ಮೂರುವರೆ ತಿಂಗಳಲ್ಲಿ ತೀರ್ಪು ನೀಡಿದ್ದು, ಮಹತ್ವದ ಬೆಳವಣಿಗೆಯಾಗಿದೆ.