ಈಜುಕೊಳದಲ್ಲಿ ಯುವಕ ಮೃತ್ಯು

<<ಮಂಗಳಾ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜಾಡುತ್ತಿದ್ದಾಗ ಘಟನೆ>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಲೇಡಿಹಿಲ್‌ನಲ್ಲಿರುವ ಮಂಗಳಾ ಈಜುಕೊಳದಲ್ಲಿ ಭಾನುವಾರ ಸಾಯಂಕಾಲ ಈಜಾಡುತ್ತಿದ್ದ ಮರೋಳಿ ಜೋಡುಕಟ್ಟೆ ನಿವಾಸಿ ಯಜ್ಞೇಶ್(19) ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಐಟಿಐ ಮುಗಿಸಿದ್ದ ಯಜ್ಞೇಶ್ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಸಾಯಂಕಾಲ ಸುಮಾರು 5.15ರ ವೇಳೆಗೆ ತನ್ನ ಸ್ನೇಹಿತರೊಂದಿಗೆ ಟಿಕೆಟ್ ಖರೀದಿಸಿ, ಈಜುಕೊಳದಲ್ಲಿ ಈಜಾಡುತ್ತಿದ್ದಾಗ ಘಟನೆ ಸಂಭವಿಸಿದೆ. ನೀರಿನಲ್ಲಿ ಮೂರು ಬಾರಿ ಮೇಲೆ ಕೆಳಗೆ ಹೋಗಿದ್ದರು. ಈಜು ಬಲ್ಲವರಾಗಿದ್ದ ಅವರು ಈಜಾಡುತ್ತಿರಬಹುದು ಎಂದು ಜತೆಯಲ್ಲಿದ್ದವರು ಭಾವಿಸಿದ್ದರು.

ಫಿಟ್ಸ್‌ನಿಂದ ಮುಳುಗಿರುವ ಸಾಧ್ಯತೆ: ಸುಮಾರು ಹೊತ್ತು ಕಳೆದರೂ ಯಜ್ಞೇಶ್ ಮೇಲೆ ಬರದೆ ಇದ್ದಾಗ ತಕ್ಷಣ ಜೀವರಕ್ಷಕ ದಳದವರು ನೀರಿನಡಿಗೆ ಹೋಗಿ ಯಜ್ಞೇಶ್‌ನನ್ನು ಮೆಲೆ ತಂದು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಈಜಾಡುತ್ತಿದ್ದಾಗ ಫಿಟ್ಸ್ ಬಂದು ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.
ಉದ್ಘಾಟನೆಗೊಂಡ ತಿಂಗಳೊಳಗೆ ದುರ್ಘಟನೆ: ಮಂಗಳಾ ಈಜುಕೊಳ ನವೀಕರಣಗೊಂಡು ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿತ್ತು. ಒಂದು ತಿಂಗಳ ಒಳಗಾಗಿ ದುರ್ಘಟನೆ ನಡೆದಿರುವುದು ವಿಪರ್ಯಾಸ. ಹೊಸದಾಗಿ ಬರುವ ಈಜುಗಾರರಲ್ಲಿ ಭಯದ ವಾತಾವರಣ ಉಂಟು ಮಾಡಿದೆ. ಪೋಷಕರು ತಮ್ಮ ಮಕ್ಕಳನ್ನು ಈಜುಕೊಳಕ್ಕೆ ಕಳುಹಿಸಲು ಹಿಂದೇಟು ಹಾಕುವ ಸನ್ನಿವೇಶ ಎದುರಾಗಬಹುದು ಎಂದು ಹಿರಿಯ ಈಜುಗಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2013 ಅ.26ರಂದು ಬೋಳೂರಿನ ಸೋಹನ್(13) ಎಂಬುವರು ಈಜಾಡುತ್ತಿದ್ದಾಗ ಮೃತಪಟ್ಟಿದ್ದರು. ಬಳಿಕ ಕುಟುಂಬಸ್ಥರು ಕೊಲೆ ಪ್ರಕರಣ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಇದೀಗ ಮತ್ತೋರ್ವ ವಿದ್ಯಾರ್ಥಿ ಈಜುಕೊಳದಲ್ಲಿ ಮೃತಪಟ್ಟಿದ್ದು, ಘಟನೆ ಮರುಕಳಿಸಿದೆ.