More

    ಮನೆಯಂಗಳದಲ್ಲೇ ಗೊಬ್ಬರ ತಯಾರು, ನೆಲಮಂಗಲ ಪುರಸಭೆಯಿಂದ ಪೈಪ್ ಕಾಂಪೋಸ್ಟಿಂಗ್ ಪ್ರಾತ್ಯಕ್ಷಿಕೆ

    ನೆಲಮಂಗಲ: ಹಸಿ, ಒಣ ತ್ಯಾಜ್ಯ ವಿಂಗಡಣೆ ಮಾಡಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಪುರಸಭೆಯೊಂದಿಗೆ ನಾಗರಿಕರು ಕೈಜೋಡಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ ತಿಳಿಸಿದರು.

    ಪಟ್ಟಣದ ಪುರಸಭೆ ಆವರಣದಲ್ಲಿ ಗುರುವಾರ ಮನೆಯಲ್ಲಿ ಉತ್ಪತ್ತಿಯಾಗುವ ಹಸಿಕಸ ಬಳಕೆ ಮಾಡಿಕೊಂಡು ಗೊಬ್ಬರ ತಯಾರಿ ಕುರಿತಾದ ಪೈಪ್ ಕಾಂಪೋಸ್ಟಿಂಗ್ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.

    ಇತ್ತೀಚೆಗೆ ಕಸದ ನಿರ್ವಹಣೆ, ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಮಾಡಿದರೆ ಮಾತ್ರ ಪರಿಸರಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದಾಗಿದ್ದು, ಇದಕ್ಕೆ ನಾಗರಿಕರ ಸಹಕಾರ ಅಗತ್ಯ ಎಂದರು.

    ಪೈಪ್ ಕಾಂಪೋಸ್ಟಿಂಗ್ ಪರಿಕಲ್ಪನೆಯಿಂದ ಮನೆ ಆವರಣದಲ್ಲಿಯೇ ಹಸಿ, ಕೊಳೆಯುವ ಪದಾರ್ಥ ಬಳಸಿ ರಾಸಾಯನಿಕ ಮುಕ್ತವಾದ ಪರಿಸರ ಸ್ನೇಹಿ ಗೊಬ್ಬರವನ್ನು ತಯಾರು ಮಾಡಿ ಕೈತೋಟದಲ್ಲಿನ ಗಿಡಗಳಿಗೆ ಬಳಕೆ ಮಾಡಬಹುದಾಗಿದೆ. ತ್ಯಾಜ್ಯ ವಿಲೇವಾರಿಗೆ ಸ್ಥಳೀಯ ಆಡಳಿತ ವ್ಯವಸ್ಥೆಯ ಅವಲಂಬನೆ ತಪ್ಪಲಿದೆ. ಇದರಿಂದ ಪರಿಸರಕ್ಕೂ ಅನುಕೂಲವಾಗಲಿದೆ ಎಂದರು.

    ಮುಖ್ಯಾಧಿಕಾರಿ ಜಯಪ್ಪ ಮಾತನಾಡಿ, ಪೈಪ್ ಕಾಂಪೋಸ್ಟಿಂಗ್ ಮಾಡಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ, ಹೆಚ್ಚು ವೆಚ್ಚ ತಗಲುವುದಿಲ್ಲ. ಮೆನೆಯ ಕಾಪೌಂಡಿನಲ್ಲಿರುವ ಚಿಕ್ಕಜಾಗವಿದ್ದರೂ ಸಾಕು. ಆಸಕ್ತರು ಅವಶ್ಯಕ ಸಾಮಗ್ರಿ ಹೊಂದಿಸಿಕೊಂಡು ಕಚೇರಿ ಸಂಪರ್ಕಿಸಿದಲ್ಲಿ ಪುರಸಭೆಯ ಸಿಬ್ಬಂದಿಗಳಿಂದ ಅಳವಡಿಸಿ ಕೊಡಲಾಗುವುದು ಎಂದರು.

    ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪೈಪ್ ಕಾಂಪೊಸ್ಟಿಂಗ್ ಪರಿಚಯಿಸುತ್ತಿದ್ದು, ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಪುರಸಭೆ ಸದಸ್ಯರಾದ ಕೆ.ಎಂ.ಶಿವಕುಮಾರ್, ಎನ್.ಗಣೇಶ್, ಆಂಜಿನಪ್ಪ, ಆಂಜಿನಮೂರ್ತಿ, ಪದ್ಮನಾಭ್, ಸುನೀಲ್‌ಮೂಡ್, ಪುರುಷೋತ್ತಮ್, ಅಭಿಯಂತರ ರವಿ, ಉಮಾ, ವ್ಯವಸ್ಥಾಪಕ ಸುಧಾಕರ್, ಆರೋಗ್ಯ ನಿರೀಕ್ಷಕ ಬಸವರಾಜು, ಉಮೇಶ್, ಮುಖಂಡರಾದ ಮುನಿಯಪ್ಪ, ನರಸಿಂಹಮೂರ್ತಿ, ರವಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

    ಪೈಪ್ ಕಾಂಪೋಸ್ಟಿಂಗ್ ಅಳವಡಿಕೆ ಹೇಗೆ: 7 ಅಡಿ ಎತ್ತರದ 9 ಇಂಚು ಅಗಲದ 2 ಪಿವಿಸಿ ಪೈಪ್‌ಗಳನ್ನು ಸಲ್ಪ ಅಂತರದಲ್ಲಿ ಮನೆಯ ಆವರಣದ ನೆಲದಿಂದ 2 ಅಡಿ ಕೆಳಗೆ ಹೂಳಬೇಕು. ನಂತರ ಆರಂಭದಲ್ಲಿ ಒಂದು ಪೈಪಿಗೆ 1 ಕೆಜಿ ಬೆಲ್ಲ, ಸಗಣಿ ಮಿಶ್ರೀತ ನೀರನ್ನು ಹಾಕಿದ ಬಳಿಕ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಹಾಗೂ ಕೊಳೆಯುವ ಕಸವನ್ನು ನಿತ್ಯವೂ ಹಾಕಿ ಪೈಪ್ ಕೊನೆಯಲ್ಲಿ ಕ್ಯಾಪ್ ಹಾಕಿ ಮುಚ್ಚಬೇಕು. ಕನಿಷ್ಠ 20 ರಿಂದ 30 ದಿನ ಗಳವರೆಗೂ ಕಸ ಹಾಕಿದ ಪೈಪ್ ತುಂಬಿದ ಬಳಿಕ ಮತ್ತೊಂದು ಪೈಪ್ ನಲ್ಲೂ ಇದೇ ವಿಧಾನ ಅನುಸರಿಸಬೇಕು. 30 ತಿಂಗಳ ಬಳಿಕ ಮೊದಲ ಪೈಪನ್ನು ತೆರೆದು ಸಿದ್ಧವಾಗಿರುವ ಸಾವಯವ ಗೊಬ್ಬರವನ್ನು ಕೈತೋಟಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಮನೆಯಲ್ಲಿ ಉಳಿಯುವ ಅನ್ನ ಮತ್ತು ಮಾಂಸದ ಪದಾರ್ಥ ಹಾಕುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts