ಮಂಡ್ಯ ತಾಲೂಕಿನಲ್ಲಿ ಯಶ್ ಪ್ರಚಾರ

ಮಂಡ್ಯ: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮಂಗಳವಾರ ಯಶ್ ತಾಲೂಕಿನ ಹಲವು ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.

ಬೆಳಗ್ಗೆ ತಾಲೂಕಿನ ಉಮ್ಮಡಹಳ್ಳಿಗೆ ತೆರಳಿದಾಗ ಜನತೆ ಸೇಬಿನ ಹಾರ ಹಾಕಿ, ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಿದರು. ಈ ವೇಳೆ ಯಶ್ ಮಾತನಾಡಿ, ಸ್ವಾಭಿಮಾನದ ಪ್ರತೀಕ ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರನ್ನು ಗೆಲ್ಲಿಸುವಂತೆ ಕೋರಿದರು.

ಸುಮಲತಾ ಗೆದ್ದರೆ ಜಿಲ್ಲೆ ಜನ ಸ್ವಾಭಿಮಾನಿಗಳು ಎಂದು ಇಡೀ ಇಂಡಿಯಾದಲ್ಲಿ ಮಾತನಾಡುತ್ತಾರೆ. ಕೇಂದ್ರದಿಂದ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ. ಅಂಬರೀಷ್ ಇದ್ದಾಗ ಯಾರೊಬ್ಬರೂ ಆ ಕುಟುಂಬದ ಬಗ್ಗೆ ಮಾತನಾಡುತ್ತಿರಲಿಲ್ಲ.

ಈಗ ಅವರ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜಿಲ್ಲೆಯ ಸೊಸೆಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕೋರಿದರು.

ನಿಖಿಲ್‌ಗೆ ಟಾಂಗ್ ಕೊಡಬೇಕೆಂದು ಜನತೆ ಒತ್ತಾಯಿಸಿದಾಗ ಬೇಡ ಎಂದರೂ ಜನತೆ ಬಿಡದ ಹಿನ್ನೆಲೆ ರೈತರ ಪರ ಕೆಲಸ ಮಾಡಿ ತೋರಿಸುತ್ತಿದ್ದೇನೆ. ನಾವು ಮಾಡಿರುವ ಕೆಲಸದಿಂದ ಅನೇಕರಿಗೆ ಒಳ್ಳೆಯದಾಗಿದೆ. ಕೆರೆ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದೇನೆ. ನಾನೂ ಮಣ್ಣಿನ ಮಗ ಎಂದರು.

ಅಲ್ಲಿಂದ ಅಂಬರಹಳ್ಳಿ, ಕನ್ನಲಿ, ಗೌಡಗೆರೆ, ಹನಕೆರೆ, ಕಟ್ಟೆದೊಡ್ಡಿ, ಹಳೆಬೂದನೂರು, ಹೊಸಬೂದನೂರು, ಶ್ರೀನಿವಾಸಪುರ ಗೇಟ್ ಸೇರಿ ಹಲವು ಹಳ್ಳಿಗಳಲ್ಲಿ ರೋಡ್ ಷೋ ನಡೆಸಿದರು. ಬಹತೇಕ ಎಲ್ಲ ಹಳ್ಳಿಗಳಲ್ಲೂ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ, ಕ್ರೇನ್ ಮೂಲಕ ಬೃಹತ್ ಹಾರ, ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.

ಮಾಜಿ ಶಾಸಕ ಎಚ್.ಬಿ.ರಾಮು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಉಮ್ಮಡಹಳ್ಳಿ ಶಿವಪ್ಪ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಮಹೇಶ್, ಬೇಲೂರು ಸೋಮಶೇಖರ್, ಅರವಿಂದ್, ಹನಕೆರೆ ಶಶಿಕುಮಾರ್ ಇತರರಿದ್ದರು.