ಏಳು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಮಂಡ್ಯ: 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಲ್ಲೆಯ ಏಳು ತಾಲೂಕಿನಲ್ಲಿ ತಲಾ ಒಂದೊಂದು ಗ್ರಾಪಂ ಆಯ್ಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಮಂಡ್ಯ ತಾಲೂಕಿನ ಮುತ್ತೇಗೆರೆ, ಕೆ.ಆರ್.ಪೇಟೆ ತಾಲೂಕು ಅಗ್ರಹಾರ ಬಾಚಹಳ್ಳಿ, ಮದ್ದೂರು ತಾಲೂಕು ಹೆಮ್ಮನಹಳ್ಳಿ, ಮಳವಳ್ಳಿ ತಾಲೂಕು ಬಂಡೂರು, ನಾಗಮಂಗಲ ತಾಲೂಕು ಹೊನ್ನಾವರ, ಪಾಂಡವಪುರ ತಾಲೂಕು ಮೇಲುಕೋಟೆ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕೆ.ಆರ್.ಸಾಗರ ಗ್ರಾಪಂ ಆಯ್ಕೆ ಮಾಡಲಾಗಿದೆ.

ಉತ್ತಮ ಸಾಧನೆ ಮಾಡಿರುವ ಗ್ರಾಪಂಗಳಿಗೆ ಸರ್ಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ. ಈ ಬಾರಿಯೂ 2017-18ನೇ ಸಾಲಿನ ಪ್ರಗತಿಯನ್ನಾಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕದ ಮಾರ್ಗಸೂಚಿಗಳನ್ನೊಳಗೊಂಡ 150 ಅಂಕದ ಪ್ರಶ್ನಾವಳಿ, ಪಂಚತಂತ್ರ ತಂತ್ರಾಂಶದಿಂದ ಉತ್ತರಿಸುವ ಮೂಲಕ ಗ್ರಾಪಂನಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಅದರಂತೆ ತಾಲೂಕಿನ ಮೂರು ಗ್ರಾಪಂ ಆಯ್ಕೆ ಮಾಡಿ ಜಿಪಂ ಸಿಇಒ ಅವರಿಗೆ ಪಟ್ಟಿ ಕಳುಹಿಸಲಾಗಿತ್ತು. ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ತಂಡ ಸ್ಥಳ ಪರಿಶೀಲನೆ ಮಾಡಿ ಒಂದು ಗ್ರಾಪಂ ಆಯ್ಕೆ ಮಾಡಿ ಪುರಸ್ಕಾರಕ್ಕೆ ಕಳುಹಿಸಿತ್ತು. ಈ ಬಳಿಕ ರಾಜ್ಯಮಟ್ಟದ ಪರಾಮರ್ಶನ ಸಮಿತಿ ಆಯ್ಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಅನುಮೋದನೆ ಪಡೆದುಕೊಂಡಿದೆ.

ಈ ಆಯ್ಕೆಯಾದ ಗ್ರಾಪಂಗಳಿಗೆ ಅ.2ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಧ್ಯಕ್ಷರು ಮತ್ತು ಪಿಡಿಒ ಗ್ರಾಪಂ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ನಾಲ್ಕನೇ ಬಾರಿ ಗೌರವ : ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಪಂ ಸತತ ನಾಲ್ಕನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. 2014-15ನೇ ಸಾಲಿನಿಂದ ಪ್ರತಿವರ್ಷ ಪ್ರಶಸ್ತಿ ಬಾಚಿಕೊಳ್ಳುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಮದ್ದೂರು ತಾಲೂಕು ಹೆಮ್ಮನಹಳ್ಳಿ ಗ್ರಾಪಂ ಮತ್ತು ಮಳವಳ್ಳಿ ತಾಲೂಕು ಬಂಡೂರು ಸತತ ಎರಡನೇ ಬಾರಿಗೆ ಪ್ರಶಸ್ತಿ ಪಡೆದುಕೊಂಡಿದೆ. ಉಳಿದ ತಾಲೂಕಿನ ಗ್ರಾಪಂಗಳು ಮೊದಲ ಬಾರಿಗೆ ಪ್ರಶಸ್ತಿ ಗಳಿಸಿವೆ.