ಪುತಿನ ಸಮಾಧಿ ಸ್ಥಳದಲ್ಲಿ ಸ್ವಚ್ಛತಾ ಅಭಿಯಾನ

ಮಂಡ್ಯ: ನವೋದಯ ಸಾಹಿತ್ಯದ ತ್ರಿರತ್ನಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ ಅವರ ಸಮಾಧಿ ಸ್ಮಾರಕದ ಸುತ್ತ ಬೆಳೆದು ನಿಂತಿದ್ದ ಗಿಡ ಗಂಟೆಗಳನ್ನು ತೆರವುಗೊಳಿಸುವ ಮೂಲಕ ಮಂಗಳವಾರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಯಿತು.

ಕನ್ನಡದ ನಂ.1 ದಿನ ಪತ್ರಿಕೆ ವಿಜಯವಾಣಿ, ದಿಗ್ವಿಜಯ ನ್ಯೂಸ್ ನೇತೃತ್ವದಲ್ಲಿ ಮೇಲುಕೋಟೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ ಸ್ವಚ್ಛತಾ ಅಭಿಯಾನದ ಹಿನ್ನೆಲೆಯಲ್ಲಿ ಶ್ರಮದಾನ ಮಾಡಿ, ಬೆಳೆದು ನಿಂತಿದ್ದ ಗಿಡಬಳ್ಳಿಗಳನ್ನು ತೆರವುಗೊಳಿಸಲಾಯಿತು.

ಸ್ವಚ್ಛತಾ ಅಭಿಯಾನಕ್ಕೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ನೇತ್ರಾವತಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಉಪನ್ಯಾಸಕಿ ಸುಜಾತ, ಪುತಿನ ಕನ್ನಡದ ನವೋದಯ ಸಾಹಿತ್ಯದ ತ್ರಿರತ್ನಗಳಲ್ಲಿ ಒಬ್ಬರು. ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತ ನಾಟಕಕಾರರು. ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲುದೊಡ್ಡ ಹೆಸರು ಎಂದರು.

ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು ಎಂದರು.

ನಂತರ ವಿದ್ಯಾರ್ಥಿಗಳು ಸಮಾಧಿ ಸುತ್ತಲು ಇದ್ದ ಗಿಡ ಬಳ್ಳಿಗಳನ್ನು ತೆರವುಗೊಳಿಸಿದರಲ್ಲದೆ, ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಲೋಟ, ಪ್ಲೇಟ್‌ಗಳು ಸೇರಿ ಕಸಕಡ್ಡಿಗಳನ್ನು ಆಯ್ದು ಸ್ವಚ್ಛಗೊಳಿಸಿದರು.

ಮೇಲುಕೋಟೆ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಚೆಲುವೆಗೌಡ, ಉಪನ್ಯಾಸಕರಾದ ಅರುಣ್, ಚಂದ್ರಶೇಖರ್, ಮಹೇಶ್, ಯೋಗೇಶ್, ಅರಣ್ಯ ಇಲಾಖೆ ವಾಸು, ಜೀವಧಾರೆ ಟ್ರಸ್ಟ್‌ನ ನಟರಾಜ್ ಮೊದಲಾದವರು ಪಾಲ್ಗೊಂಡಿದ್ದರು. ಶ್ರಮದಾನಿಗಳಿಗೆ ಅರಣ್ಯ ಇಲಾಖೆಯ ಸತ್ಯಜಿತ್ ಟೀ, ಬಿಸ್ಕೆಟ್ ವ್ಯವಸ್ಥೆ ಮಾಡಿದರು.

ಸ್ಮಾರಕದ ಅಭಿವೃದ್ಧಿಗೆ ಒತ್ತು: ಪುತಿನ ಅವರ ಸಮಾಧಿ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ವಿಜಯವಾಣಿ, ದಿಗ್ವಿಜಯ ನ್ಯೂಸ್ ನಿರ್ಧರಿಸಿದ್ದು, ಇದಕ್ಕೆ ಪುತಿನ ಪ್ರತಿಷ್ಠಾನ ಹಾಗೂ ಸ್ಥಳೀಯರ ನೆರವು ಕೋರಲಾಯಿತು.

ಸಮಾಧಿ ಇರುವ ಸ್ಥಳ ಶಿಕ್ಷಣ ಇಲಾಖೆಗೆ ಸೇರಿದ್ದು, ಇಲಾಖೆ ಅನುಮತಿ ಪಡೆದು ಪತ್ರಿಕೆ ಸಮಾಧಿಯನ್ನು ಪುತಿನ ಅವರ ಸಮಾಜದ ಸಂಪ್ರದಾಯದಂತೆ ಅಭಿವೃದ್ಧಿಪಡಿಸಿ, ಉದ್ಯಾನವನ ಮಾಡಲು ನಿರ್ಧರಿಸಿದ್ದು, ಇದಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಚಲುವೇಗೌಡ ಸಹಮತ ವ್ಯಕ್ತಪಡಿಸಿದರು.