ತೆಲಂಗಾಣ ಮಾದರಿ ಪ್ರೋತ್ಸಾಹಿಸಲು ಮನವಿ

ಮಂಡ್ಯ: ಅನ್ನದಾತರಿಗೆ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಂಘದ ಎಚ್.ಕೆ.ದೊಡ್ಡಲಿಂಗಯ್ಯ, ಗಾ.ಚಿ.ಸ್ವಾಮಿ, ಕೆಂಪೇಗೌಡ, ಎಂ.ಟಿ.ವೆಂಕಟೇಶ್, ಕೆ.ಎನ್.ಲೋಕೇಶ್, ಉತ್ತು, ಬಿತ್ತು, ಬೆಳೆದು ಮಾನವ ಕುಲಕ್ಕೆ ತುತ್ತು ನೀಡುವ ಅನ್ನದಾತ ಇಂದು ತನ್ನ ಉಳಿವಿಗಾಗಿ ಹೋರಾಟ ಮಾಡಬೇಕಾದ ದುಸ್ಥಿತಿಗೆ ಬಂದಿರುವುದು ದುರಂತ. ಕೃಷಿ ಪ್ರಧಾನ ಎನಿಸಿಕೊಂಡಿರುವ ಈ ದೇಶದಲ್ಲಿ ರೈತರಿಗೆ ಯಾವುದೇ ರೀತಿಯ ಪ್ರೋತ್ಸಾಹ ಸಿಗದ ಕಾರಣದಿಂದ ಹಲವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ರೈತರ ಏಳಿಗೆ ಹೆಸರಿನಲ್ಲಿ ಸಾಲ ಮನ್ನಾ ವಿಚಾರದಲ್ಲಿ ಅವನ ಹಿತಕ್ಕಿಂತ ಕೂಗಾಟಗಳೇ ಹೆಚ್ಚಾಗಿವೆ. ಅನ್ನದಾತ ನ್ಯಾಯವಾದ ಬೆಲೆ ಪಡೆದುಕೊಳ್ಳಲು ಪರದಾಡುವಂತಾಗಿದೆ.

ರೈತರ ರಕ್ಷಣೆಗಾಗಿ ತೆಲಂಗಾಣ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಪ್ರೋತ್ಸಾಹ ಧನ ನೀಡಲು ಮುಂದಾಗಿವೆ. ಆದ್ದರಿಂದ ಕರ್ನಾಟಕ ಸರ್ಕಾರ ಕೂಡ 1 ಎಕರೆಗೆ 10 ಸಾವಿರ ರೂ.ಗಳನ್ನು ನೇರವಾಗಿ ರೈತರ ಖಾತೆಗಳಿಗೆ ಹಾಕಿದರೆ, ರೈತರಿಗೆ ತಾತ್ಕಾಲಿಕವಾಗಿ ಜೀವನ ನಿರ್ವಹಣೆಗೆ ಸಹಕಾರಿಯಾಗಲಿದೆ. ಆದ್ದರಿಂದ ಸರ್ಕಾರ ತಕ್ಷಣ ಈ ಯೋಜನೆ ಜಾರಿಗೆ ತರಬೇಕು.

ಅಂತೆಯೇ, ರೈತರು ಮಾಡುವ ಎಲ್ಲ ಉತ್ಪಾದನೆ ದೇಶದ ಹಿತಕ್ಕಾಗಿ ಆಗಿರುವುದರಿಂದ ಅವರು ಬಳಸುವ ಎಲ್ಲ ಕೃಷಿ ಯಂತ್ರೋಪಕರಣಗಳು, ಪರಿಕರಗಳಿಗೆ ಜಿ.ಎಸ್.ಟಿ. ವಿಧಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.