ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ: ಸಿಎಂ ಕುಮಾರಸ್ವಾಮಿ

ದೆಹಲಿ/ಬೆಂಗಳೂರು: ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ನಟಿ ಸುಮಲತಾ ಅಂಬರೀಷ್​ ವಿರುದ್ಧ ಸಚಿವ ಎಚ್​.ಡಿ.ರೇವಣ್ಣ ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ಭವನದ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರ ಬಗ್ಗೆಯೇ ಆಗಲಿ ವೈಯಕ್ತಿಕ ಹೇಳಿಕೆ ನೀಡುವುದು ಸರಿಯಲ್ಲ. ಇನ್ನೊಬ್ಬರ ಬಗ್ಗೆ ಸಣ್ಣತನದ ಮಾತನಾಡುವುದು ಸರಿಯಲ್ಲ. ನಮ್ಮ ನಾಯಕರುಗಳಿಗೆ ಮನವಿ ಮಾಡುತ್ತೇನೆ. ಮಂಡ್ಯದ ವಿಚಾರವನ್ನು ನನಗೆ ಬಿಟ್ಟುಬಿಡಿ. ರೇವಣ್ಣ ಹೇಳಿಕೆ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಎಂಟು ತಿಂಗಳ ಹಿಂದೆ ಮಂಡ್ಯದಲ್ಲಿ ಬೇರೆ ಪರಿಸ್ಥಿತಿ ಇತ್ತು. ಈಗ ಬದಲಾಗಿದೆ. ಹೀಗಾಗಿ ನಿಖಿಲ್​ನನ್ನು ಆಯ್ಕೆ ಮಾಡಿದ್ದೇವೆ. ದೇಶದ ಪ್ರತಿ ಪ್ರಜೆಯು ಚುನಾವಣೆಯಲ್ಲಿ ನಿಲ್ಲಲು ಅರ್ಹರಾಗಿದ್ದಾರೆ. ಕುಟುಂಬ ರಾಜಕಾರಣ ಎಲ್ಲಿ ಇಲ್ಲ ನೀವೆ ಹೇಳಿ? ಜನಗಳೇ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ನಿಖಿಲ್​ ರಾಜಕೀಯ ಪ್ರವೇಶದ ಬಗ್ಗೆ ಸಮರ್ಥಿಸಿಕೊಂಡರು.

ಕೇಂದ್ರದ ಯೋಜನೆ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ಹಣ ಹಾಕುತ್ತೆವೆಂದು ಹೇಳಿದ್ದಾರೆ. ಆದರೆ, 6 ಜನರಿಗೆ ಮಾತ್ರ ಹಣ ಬಂದಿದೆ. ಜನತೆ ಕೇಂದ್ರದ ಯೋಜನೆ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರಧಾನಿ ಅವರು ಕಲಬುರಗಿ ಸಮಾವೇಶದಲ್ಲಿ ರೈತರಿಗೆ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದು ಸರಿಯಲ್ಲ. ಪ್ರಧಾನಿ ಈ ರೀತಿ ಹೇಳಬಾರದಿತ್ತು. ಕೇಂದ್ರದ ಯೋಜನೆಗೆ ನಾವು ರೈತರ ಮಾಹಿತಿ ಹಾಗೂ ಫಲಾನುಭವಿಗಳ ಪಟ್ಟಿ ನೀಡಿದ್ದೇವೆ. 59,48,000 ಫಲಾನುಭವಿ ರೈತರು ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. 8, 54, 000 ರೈತರು ಅರ್ಜಿ ನೀಡಿದ್ದಾರೆ. ಈ ಮಾಹಿತಿಯನ್ನು ಕಿಸಾನ್ ಸಮ್ಮಾನ್ ಯೋಜನೆಗೆ ನೀಡಿದ್ದೇವೆ. ಮೂರೂವರೆ ಲಕ್ಷ ರೈತರ ಹೆಸರನ್ನು ಯೋಜನೆಯ ಆಪ್​ನಲ್ಲಿ ಹಾಕಿದ್ದೇವೆ. ನಿನ್ನೆಯವರೆಗೆ 6 ಮಂದಿಗೆ ಮಾತ್ರ ಹಣ ಬಂದಿದೆ. ಇದರಲ್ಲಿ ಒಂದು ಖಾತೆಗೆ 950 ರೂ ಅಷ್ಟೇ ಬಂದಿದೆ ಎಂದು ಟೀಕಿಸಿದರು. (ದಿಗ್ವಿಜಯ ನ್ಯೂಸ್​)