ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಡ ಎನ್ನುತ್ತಲೇ ಪ್ರತಿಸ್ಪರ್ಧಿಗಳನ್ನು ಕುಟುಕಿದ ಸುಮಲತಾ ಅಂಬರೀಷ್​

ಮಂಡ್ಯ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮಂಡ್ಯ ಕ್ಷೇತ್ರದ ರಾಜಕೀಯ ಬೆಳವಣಿಯತ್ತ ರಾಜ್ಯದ ಜನರ ದೃಷ್ಟಿ ನೆಟ್ಟಿದೆ. ಅದರಲ್ಲೂ ನಟಿ ಸುಮಲತಾ ಅವರ ನಡೆ ಏನು ಎಂಬುದೇ ಹಲವರ ಕುತೂಹಲವಾಗಿದೆ. ಈ ಮಧ್ಯೆ ತನ್ನ ಪ್ರತಿಸ್ಪರ್ಧಿಗಳನ್ನು ಸುಮಲತಾ ಪರೋಕ್ಷವಾಗಿ ಕುಟುಕಿದ್ದಾರೆ.

ಗುರುವಾರ ತಡರಾತ್ರಿ ತಮ್ಮ ಅಧಿಕೃತ ಫೇಸ್​ಬುಕ್​ ಪೇಜ್​ನಲ್ಲಿ ಹೊಸ ಪೋಸ್ಟ್​ ಅಪ್​ಲೋಡ್​ ಮಾಡಿರುವ ಸುಮಲತಾ ಅವರು ಮಂಡ್ಯದ ಪ್ರತಿಯೊಬ್ಬರೂ ಅಂಬರೀಷ್ ಬಂಧುಗಳಾಗಿದ್ದಾರೆ. ಅಂಬರೀಷ್​​ ಅವರಲ್ಲಿದ್ದ ಗುಣವೇ ಮಂಡ್ಯ ಜನರಲ್ಲಿದೆ. ಮಂಡ್ಯದ ಮಣ್ಣಿನ ಗುಣದಲ್ಲಿ ಕಪಟ, ಸುಳ್ಳುಗಳಿಲ್ಲ. ಸಮಯಕ್ಕೆ ತಕ್ಕಂತೆ ಮಾತಾಡುವ ಜಾಯಮಾನ ಇಲ್ಲ. ಮಂಡ್ಯದ ಮಣ್ಣು ಕೇವಲ ಮುಗ್ಧತೆಯಿಂದ ಕೂಡಿಲ್ಲ. ಬದಲಾಗಿ ಪ್ರಾಮಾಣಿಕತೆಯಿಂದಲೂ ಕೂಡಿದೆ. ಆ ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಡ. ಅಂಬರೀಷ್ ಪಾಲಿಸುತ್ತಿದ್ದ ಪ್ರಾಮಾಣಿಕ ರಾಜಕೀಯ ನನ್ನದಾಗಿದೆ ಎಂದು ಪ್ರತಿಸ್ಪರ್ಧಿಗಳಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

ಅಂಬರೀಷ್​ ರಾಜಕೀಯ ಕಪಟವಿರಲಿಲ್ಲ. ಸುಳ್ಳು ಭರವಸೆಗಳಿಲ್ಲದ, ಒಳಗೊಂದು, ಹೊರಗೊಂದು ಮಾತುಗಳಿರುತ್ತಿರಲಿಲ್ಲ. ಜನರಿಂದ ಕೆಲಸವಾಗಬೇಕು ಎಂದಾಗ ಜನರೆದುರು ನಾಟಕವಾಡಿ ಮೋಸಗೊಳಿಸದ, ಇದ್ದದ್ದನ್ನು ಇದ್ದ ಹಾಗೆ ಹೇಳುವ ದಿಟ್ಟ ನಡೆಯ ರಾಜಕೀಯ ಅಂಬರೀಷ್​ ರಾಜಕೀಯ ಎಂದಿರುವ ಸುಮಲತಾ ಅವರು ಆ ರಾಜಕೀಯವೇ ಅತ್ಯುತ್ತಮ. ಅಂಬರೀಷ್​ ರಾಜಕೀಯವೇ ನಮ್ಮದಾಗಲಿ ಎಂದು ಮಂಡ್ಯ ಜನರಿಗೆ ಕರೆ ನೀಡಿದ್ದಾರೆ.

ಗುರುವಾರವಷ್ಟೇ ಜೆಡಿಎಸ್​ ಮಂಡ್ಯದ ಲೋಕಸಭಾ ಅಭ್ಯರ್ಥಿಯನ್ನಾಗಿ ನಿಖಿಲ್​ ಕುಮಾರಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಸುಮಲತಾ ಅವರು ಮಾಡಿರುವ ಫೇಸ್​ಬುಕ್​ ಪೋಸ್ಟ್​ ತಿರುಗೇಟು ನೀಡಿದಂತಿದೆ. (ದಿಗ್ವಿಜಯ ನ್ಯೂಸ್​)