ಯಾರದ್ದೋ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳಲು ಆಗಲ್ಲ, ಜಿಲ್ಲೆಗೆ ಕಳಂಕ ತರಬೇಡಿ: ಸಚಿವ ಪುಟ್ಟರಾಜು

ಮಂಡ್ಯ: ನಟಿ ಸುಮಲತಾ ಅಂಬರೀಷ್​ ಹಾಗೂ ನಿಖಿಲ್​ ಕುಮಾರಸ್ವಾಮಿ ನಡುವೆ ಚುನಾವಣಾ ಅಖಾಡ ಸಜ್ಜಾಗಿದ್ದಾಗಿನಿಂದ ಸಕ್ಕರೆ ನಾಡಿನ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇಂದು ಸುಮಲತಾ ವಿರುದ್ಧ ವಾಕ್ಸಮರ ಸಾರಿರುವ ಸಚಿವ ಸಿ.ಎಸ್​.ಪುಟ್ಟರಾಜು ಮಂಡ್ಯ ಜಿಲ್ಲೆಗೆ ಕಳಂಕ ತರುವಂಥ ಕೆಲಸ ಮಾಡಬೇಡಿ ಎಂದು ಖಡಕ್​ ಸಂದೇಶ ರವಾನಿಸಿದ್ದಾರೆ.

ಸುಮಲತಾಗೆ ನಟರಾದ ದರ್ಶನ್ ಹಾಗೂ ಯಶ್ ಬೆಂಬಲ ವಿಚಾರವಾಗಿ ಶನಿವಾರ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರದ್ದೋ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳಲು ಆಗಲ್ಲ. ಯಾರಿಗೆ ಬುದ್ಧಿ ಕಲಿಸಬೇಕೆಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಕಿಡಿಕಾರಿದರು.

ಕತ್ತಲೆಯಲ್ಲಿ ನಿಂತು ಕಲ್ಲು ಹೊಡೆದರೆ ನಾವು ಹೆದರಲ್ಲ
ಇದೇ ವೇಳೆ ನಿಖಿಲ್ ರೋಡ್ ಶೋ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾತನಾಡಿ, ಕತ್ತಲೆಯಲ್ಲಿ ನಿಂತು ಕಲ್ಲು ಹೊಡೆದರೆ ನಾವು ಹೆದರಲ್ಲ. ಕಲ್ಲು ಹೊಡೆದು ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮಂಡ್ಯ ಜಿಲ್ಲೆಗೆ ಕಳಂಕ ತರುವಂಥ ಕೆಲಸ ಮಾಡಬೇಡಿ. ಅಂತಹ ಕೆಲಸ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಟೀಕಾ ಪ್ರಹಾರ ನಡೆಸಿದರು.

ಸ್ವಾಭಿಮಾನಕ್ಕೆ ಹೆಸರಾದ ಜಿಲ್ಲೆ ಮಂಡ್ಯ
ನಿಖಿಲ್​ ಅತ್ಯಂತ ಪ್ರಚಂಡ ಬಹುಮತದಲ್ಲಿ ಗೆಲ್ಲುತ್ತಾರೆ. ಸ್ವಾಭಿಮಾನಕ್ಕೆ ಹೆಸರಾದ ಜಿಲ್ಲೆ ಮಂಡ್ಯ. ಯಾರು ಬೆರಳು ತೋರದ ರೀತಿಯಲ್ಲಿ ಈ ಚುನಾವಣೆ ಮಾಡಬೇಕು. 2018ರ ಚುನಾವಣೆಯಲ್ಲೇ ಜಿಲ್ಲೆಯ ಜನ ಪ್ರಜ್ಞಾವಂತರು, ಸ್ವಾಭಿಮಾನಿಗಳು ಎಂಬುದನ್ನು ತೋರಿಸಿದ್ದಾರೆ. ಕಾಂಗ್ರೆಸಿನವರ ಜತೆ ಸೇರಿ ಒಗ್ಗಟ್ಟಿನಿಂದ ಚುನಾವಣೆ ಮಾಡಲು ನಿರ್ಧರಿಸಿದ್ದೇವೆ. ಅದನ್ನು ಮಾಡಿ ತೋರಿಸುತ್ತೇವೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)