ಚುನಾವಣೆ ಬಳಿಕ ಟೀ ಸ್ಟಾಲ್​ಗೆ ಭೇಟಿ ಕೊಟ್ಟು ಜನರೊಂದಿಗೆ ಟೀ ಸವಿಯುತ್ತಾ ಎದುರಾಳಿಗೆ ಸಂದೇಶ ರವಾನಿಸಿದ ಅಭಿಷೇಕ್​

ಮಂಡ್ಯ: ಕಳೆದೊಂದು ತಿಂಗಳಿನಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಣಕಣವಾಗಿ ತುಂಬಾ ಸದ್ದು ಮಾಡಿದ್ದ ಸಕ್ಕರೆ ನಾಡು ಮತದಾನ ಮುಗಿದ ಬಳಿಕ ಸ್ವಲ್ಪ ಕೂಲ್​ ಆಗಿದೆ. ಪ್ರಚಾರದ ಕಸರತ್ತಿನಿಂದ ತುಂಬಾ ದಣಿದಿದ್ದ ಮಂಡ್ಯ ರಾಜಕೀಯ ನಾಯಕರು ರಿಲ್ಯಾಕ್ಸ್​ ಮೂಡ್​ನಲ್ಲಿದ್ದು, ಅಂಬಿ ಪುತ್ರ ಅಭಿಷೇಕ್​ ಬಿಡುವಿನ ವೇಳೆಯಲ್ಲಿ ಸಾರ್ವಜನಿಕರೊಂದಿಗೆ ಟೀ ಸ್ಟಾಲ್​ನಲ್ಲಿ ಚಹಾ ಕುಡಿಯುವ ಮೂಲಕ ಎದುರಾಳಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಮಂಡ್ಯದ ಮಹಾವೀರ್ ಸರ್ಕಲ್ ಬಳಿಯ ಟೀ ಸ್ಟಾಲ್​ಗೆ ಕಾರಿನಲ್ಲಿ ಬಂದ ಅಭಿಷೇಕ್, ಸಾರ್ವಜನಿಕರೊಂದಿಗೆ ಟೀ ಸವಿಯುತ್ತಾ ಕೆಲ ಕಾಲ ಅವರೊಂದಿಗೆ ಸಂವಾದ ನಡೆಸಿದರು. ಹಾಸ್ಯ ಚಟಾಕಿ ಹಾರಿಸಿ, ಅಪ್ಪನಂತೆಯೇ ಎಲ್ಲರ ಕಾಲೆಳೆದು ನಗೆಗಡಲಲ್ಲಿ ತೇಲುವಂತೆ ಮಾಡಿ ತಾವು ಖುಷಿಪಟ್ಟರು.

ಈ ವೇಳೆ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅಭಿಷೇಕ್​ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಚುನಾವಣೆಯಾದ ಬಳಿಕ ಸುಮಲತಾ ಅಂಬರೀಷ್​ ಅವರು ಸಿಂಗಾಪುರಕ್ಕೆ ಹೋಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಏನಂತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಈಗ ಮಂಡ್ಯದಲ್ಲಿಯೇ ಇದ್ದೀವಿ ಎಂದು ಉತ್ತರ ಕೊಟ್ಟರು. ಟೀ ಕುಡಿಯಲು ಮಹಾವೀರ್​ ಸರ್ಕಲ್​ ಬಳಿ ಬಂದಿದ್ದೀನಿ. ಯಾರಿಗಾದರೂ ಸಂದೇಹವಿದ್ದರೆ ಬಂದು ನೋಡಿಕೊಂಡು ಹೋಗಿ ನಾವಿನ್ನೂ ಮಂಡ್ಯದಲ್ಲಿಯೇ ಇದ್ದೇವೆ ಎಂದು ತಿರುಗೇಟು ನೀಡಿದರು.

ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಬಂದವು. ಇದೆಲ್ಲಾ ಚುನಾವಣೆಯ ತಂತ್ರಗಾರಿಕೆಯಾಗಿದ್ದು, ಅದನ್ನೆಲ್ಲಾ ಎದುರಿಸಿದ್ದೇವೆ ಎಂದ ಅಭಿಷೇಕ್​, ತಂದೆ ಇದ್ದಾಗ ಪ್ರಚಾರದಲ್ಲಿ ಭಾಗಿಯಾಗುತ್ತಿರಲಿಲ್ಲ. ಈಗ ತಾಯಿಯ ಜತೆ ಪ್ರಚಾರ ಮಾಡಿದ್ದೀರಿ ಹೇಗನಿಸುತ್ತದೆ ಎಂಬ ಪ್ರಶ್ನೆಗೆ, ನಾವು ಹೋದಲೆಲ್ಲ ಉತ್ತಮ ಪ್ರತಿಕ್ರಿಯೆ ದೊರಕಿದೆ. ನಮ್ಮ ತಂದೆಯ ಮೇಲೆ ಜನರು ಇಟ್ಟಿರುವ ಪ್ರೀತಿ ಕಂಡು ನಮಗೆ ಆಶ್ಚರ್ಯವಾಯಿತು. ಮಂಡ್ಯ ಮತ್ತು ಅಂಬರೀಷ್​​ ಅವರ ಸಂಬಂಧ ತುಂಬಾ ಬಲವಾಗಿದೆ ಎಂಬುದು ಮೊದಲೇ ಗೊತ್ತಿತ್ತು. ಆದರೆ, ಇಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂಬುದು ಈ ಬಾರಿ ಗೊತ್ತಾಯಿತು. ನಮ್ಮ ತಂದೆಗೆ ಮಾತ್ರವಲ್ಲ ನಮಗೂ ತಮ್ಮ ಪ್ರೀತಿಯನ್ನು ಜನರು ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಬಂದು ದಾಖಲೆಯ ಮತದಾನ ಮಾಡಿದ್ದಾರೆ. ಇದು ನಮಗೆ ಧನಾತ್ಮಕವಾಗಿ ಪರಿಣಾಮ ಬೀರಬಹುದು. ಜನ ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ಲೀಡಿಂಗ್​ ಎಂಬ ಮಾತು ಬೇಡ. ಅದು ಅಹಂಕಾರದ ಮಾತಾಗುತ್ತದೆ. ಜನ ನಮ್ಮ ಕೈಹಿಡಿದು ಆಶೀರ್ವಾದ ಮಾಡಿದ್ದಾರೆ ಅಷ್ಟೇ ಸಾಕು. ಕೊನೆವರೆಗೂ ನಮ್ಮ ಮತ್ತು ಮಂಡ್ಯ ಸಂಬಂಧ ಚೆನ್ನಾಗಿಯೇ ಇರುತ್ತದೆ ಎಂದು ಟೀ ಕುಡಿಯುತ್ತಲೇ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದರು. (ದಿಗ್ವಿಜಯ ನ್ಯೂಸ್​)