ಮಂಡ್ಯದಲ್ಲಿ ಜೋರಾಯ್ತು ಮಾತಿನ ಸಮರ

ಮಂಡ್ಯ: ದೇಶದ ಹೈವೋಲ್ಟೆಜ್ ಕ್ಷೇತ್ರ ಮಂಡ್ಯದಲ್ಲಿ ವಾಕ್ಸಮರ ನಡೆಯುತ್ತಿದ್ದು, ವೈಯಕ್ತಿಕ ವಿಚಾರಗಳ ಕೆಸರೆರಚಾಟ ಹೆಚ್ಚಾಗುತ್ತಿದೆ. ಮಂಗಳವಾರ ಬೆಳಗ್ಗೆ ಸುಮಲತಾ ನೀಡಿದ ಹೇಳಿಕೆಗೆ ಸಚಿವ ಪುಟ್ಟರಾಜು ತಿರುಗೇಟು ನೀಡಿದ್ದರೆ, ನಟ ಯಶ್, ನಿಖಿಲ್ ಮಾತಿನ ಯುದ್ಧ ಮುಂದುವರಿದಿದೆ. ಅದರ ಪ್ರಮುಖಾಂಶಗಳು ಇಂತಿವೆ.

ಸುಮಲತಾ ಏಟು: ಅಂಬಿ ಕುಟುಂಬದ ವಿರುದ್ಧ ಕೆಟ್ಟದಾಗಿ ಹೇಳುವಂತೆ ನಮ್ಮ ನೌಕರರ ಮೇಲೆ ಒತ್ತಡ ಹಾಕುತ್ತಿದ್ದು, ಅವರು ವಾರದೊಳಗೆ ಸುದ್ದಿಗೋಷ್ಠಿ ಮಾಡಿ ವಿಷಯ ಬಹಿರಂಗಪಡಿಸಲಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿದರೆ ವಿದೇಶ ಪ್ರವಾಸ, ಬೆಂಗಳೂರಿನಲ್ಲಿ ನಿವೇಶನ ಹಾಗೂ 10 ಲಕ್ಷ ರೂ. ನೀಡುವುದಾಗಿ ನಮ್ಮ ಯಜಮಾನರ ಜತೆ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಆಮಿಷ ಬಂದಿದೆ. ಇಷ್ಟೊಂದು ಕೆಟ್ಟ ರಾಜಕಾರಣ ನಾನು ನೋಡಿರಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸಮಲತಾ ಪ್ರತಿಕ್ರಿಯಿಸಿದರು.

ಪುಟ್ಟರಾಜು ತಿರುಗೇಟು: ನಮಗೆ ಅಂತಹ ದುರ್ಗತಿ ಬಂದಿಲ್ಲ. ಸುಮಲತಕ್ಕ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ ಜನರ ಬಳಿ ಹೋಗಲಿ. ಏ.18ಕ್ಕೆ ಜನ ತೀರ್ವನಿಸುತ್ತಾರೆ. ಯಾಕೆ ಅಷ್ಟೊಂದು ಡಿಪ್ರೆಷನ್ ಆಗ್ತಾರೆ ಗೊತ್ತಿಲ್ಲ. 60 ವರ್ಷಗಳಿಂದ ರಾಜಕಾರಣ ಮಾಡಿದವರೇ ಅವರ ಮುಂದೆ ಕೈಕಟ್ಟಿ ನಿಲ್ಲಬೇಕು. ಆ ಮಟ್ಟಿಗೆ ನಡವಳಿಕೆ ಪ್ರದರ್ಶನ ಮಾಡುತ್ತಿದ್ದಾರೆ. ಪರವಾಗಿಲ್ಲ ಕಣ್ರೀ ಅವರು. ಐಟಿ ರೇಡ್ ಆಗೋದು ಗೊತ್ತಾಗುತ್ತೆ. ಇಂತಹ ಸನ್ನಿವೇಶಗಳು ಗೊತ್ತಾಗುತ್ತೆ. ಅವರೇನು ಅಂಜನ ಇಟ್ಕೊಂಡಿದ್ದಾರಾ? ಮಂಡ್ಯ ಜನ ಮುಟ್ಠಾಳರಲ್ಲ. ಇದರಿಂದ ಮುಟ್ಠಾಳರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸಿ.ಎಸ್. ಪುಟ್ಟರಾಜು ತಿರುಗೇಟು ನೀಡಿದರು.

ಅಂಬಿ ಅಣ್ಣನಿಗೆ ಒಬ್ರೇ ಹೆಂಡ್ತಿ..

ಹೌದಪ್ಪ ನನಗೆ ಬಾಡಿಗೆ ಕಟ್ಟೋದಕ್ಕೆ ಯೋಗ್ಯತೆ ಇಲ್ಲ ಅಂತಾನೇ ಅನ್ಕೊಳಿ. ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರ ಅಲ್ಲ, ಉತ್ತರ ಕರ್ನಾಟಕದಲ್ಲೂ ಇದ್ದಾರೆ. ನಾನೇನು ಮಾಡಿದ್ದೇನೆ ಅಂತ ಹೋಗಿ ಕೊಪ್ಪಳ ಅಂತ ಊರಿದೆಯಲ್ಲ ಅಲ್ಲಿ ಕೇಳಲಿ. ರಾಜ್ಯದ ಜನತೆಗೆ ಯಾವುದೇ ಕನ್​ಫ್ಯೂಷನ್ ಇಲ್ಲ. ಅಂಬರೀಷ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡ್ತಿ. ಜನರ ಮುಗ್ಧತೆಯನ್ನು ಮಿಸ್​ಯು್ಯೂಸ್ ಮಾಡಿಕೊಳ್ಳಬಾರದು. ಅಭಿವೃದ್ಧಿ ಬಗ್ಗೆ ಇಬ್ಬರು ಅಭ್ಯರ್ಥಿಯನ್ನು ಮುಖಾಮುಖಿ ಕೂರಿಸಿ ಮಾತನಾಡಿಸಿ. ಅವರು (ನಿಖಿಲ್) ಯಾರಿಗೂ ನೋಯಿಸಬಾರದು ಅಂತ ಹೇಳಿದರೆ ಅದು ಖುಷಿಯ ವಿಚಾರ. ಸಂತೋಷ ಉಕ್ಕಿ ಬರ್ತಿದೆ ಎಂದು ನಟ ಯಶ್ ಹೇಳಿದರು.

ಡೈಲಾಗ್ ಹೊಡೆದಂಗೆ ಅಲ್ಲ..

ಸಿನಿಮಾದಲ್ಲಿ ಡೈಲಾಗ್ ಹೊಡೆದಂಗೆ ಅಲ್ಲ ಸ್ವಾಮಿ. ಇದು ಸಾರ್ವಜನಿಕ ಜೀವನ. ಮಹಾನುಭಾವರು ಯೋಗ್ಯತೆ ಬಗ್ಗೆ ಮಾತನಾಡಿದರು. ಅದಕ್ಕೆ ನಿನ್ನೆ ನಾನು ಸ್ಪಷ್ಟನೆ ನೀಡಿದ್ದೇನೆ. ಪಕ್ಷೇತರ ಅಭ್ಯರ್ಥಿ ಈಗ ಮಂಡ್ಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಬಹುಶಃ ನಾನು ಮನವರಿಕೆ ಮಾಡಿಕೊಟ್ಟ ಮೇಲೆ ಅವರಿಗೆ ಅಭಿವೃದ್ಧಿ ಬಗ್ಗೆ ಅರ್ಥವಾಗಿದೆ. ಬಿಜೆಪಿಗೆ ಮಂಡ್ಯದಲ್ಲಿ ನೆಲೆನೂ ಇಲ್ಲ, ಇಲ್ಲಿ ಕಾರ್ಯಕರ್ತರೂ ಇಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಪ್ರತಿಕ್ರಿಯಿಸಿದರು.

ಸೋತರೂ ಇಲ್ಲೆ ಇರ್ತೆವೆ..

ನಾವು ಅವರ ಬಗ್ಗೆ ಮಾತಾಡೋದೆ ಇಲ್ಲ, ಇನ್ನು ಹಲ್ಲೆ ಮಾಡ್ತೀವಾ? ನಮಗೆ ಬಿಜೆಪಿ, ಕಾಂಗ್ರೆಸ್, ರೈತಸಂಘ, ಜೆಡಿಎಸ್, ಡಿಎಸ್​ಎಸ್ ಸೇರಿ ಹಲವು ಸಂಘಟನೆಗಳ ಕಾರ್ಯಕರ್ತರು ಬೆಂಬಲಕ್ಕಿದ್ದಾರೆ. ದರ್ಶನ್ ಮತ್ತು ಯಶ್ ಬಹಳ ಕಷ್ಟಪಟ್ಟು ಹೀರೋ ಆಗಿದ್ದಾರೆ. ಅಂತಹವರ ಬಗ್ಗೆ ಮಾತನಾಡುವಾಗ ಯೋಚನೆ ಮಾಡಬೇಕು. ನಾವು ಗೆದ್ದರೂ ಇಲ್ಲೆ ಇರುತ್ತೇವೆ. ಸೋತರೂ ಇಲ್ಲೆ ಇರ್ತೆವೆ. ಅವರು ಗೆದ್ದರೆ ಇಲ್ಲೇ ಇರ್ತಾರಾ? ಎಂದು ಅಭಿಷೇಕ್ ಅಂಬರೀಷ್ ತಿರುಗೇಟು ನೀಡಿದರು.