ಪ್ರತಿಭಾನ್ವೇಷಣಾ ಪರೀಕ್ಷೆಗೆ ಸಜ್ಜು

ಮಂಡ್ಯ: ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ರಾಷ್ಟ್ರೀಯ ಪ್ರತಿಭಾನ್ವೇಷಣೆಯಡಿ ಆಯೋಜಿಸುವ ಪರೀಕ್ಷೆಗೆ ಜಿಲ್ಲೆಯ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಡಯಟ್‌ನ ವತಿಯಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಸೋಮವಾರ ನಗರದ ಗಾಂಧಿಭವನದಲ್ಲಿ ಮಂಡ್ಯ ತಾಲೂಕಿನ 80 ಶಾಲೆಗಳಿಗೆ ತಲಾ ಇಬ್ಬರು ವಿದ್ಯಾರ್ಥಿಗಳು ಮತ್ತು 73 ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಿಂದ ತರಬೇತಿ ನೀಡಲಾಯಿತು. ನವೆಂಬರ್‌ನಲ್ಲಿ ಎನ್‌ಎಂಎಂಎಸ್ ಮತ್ತು ಎನ್‌ಟಿಎಸ್‌ಇ ಎಂದು ಎರಡು ಪರೀಕ್ಷೆ ಆಯೋಜಿಸಲಾಗುತ್ತದೆ. ಇಲ್ಲಿ ಉತ್ತೀರ್ಣರಾದವರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಏನಿದು ಪರೀಕ್ಷೆ: ನ್ಯಾಷನಲ್ ಮಿನ್‌ಕಮ್ ಮೆರಿಟ್ ಸ್ಕಾಲರ್‌ಶಿಪ್(ಎನ್‌ಎಂಎಂಎಸ್) ಪರೀಕ್ಷೆಯನ್ನು ಸರ್ಕಾರಿ, ಅನುದಾನಿತ ವ್ಯಾಸಂಗ ಮಾಡುವ 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುವುದು. ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲು ಕೆಲ ನಿಬಂಧನೆಗಳಿರುತ್ತವೆ. ಉತ್ತೀರ್ಣರಾದವರಿಗೆ 9ನೇ ತರಗತಿಯಿಂದ ಪದವಿ ಪೂರ್ವ ಶಿಕ್ಷಣ ಮುಗಿಯುವವರೆಗೂ ಪ್ರತಿವರ್ಷ 12 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ 173 ವಿದ್ಯಾರ್ಥಿಗಳು ಉತೀರ್ಣರಾಗಿದ್ದರು. ಈ ಪೈಕಿ ಮಳವಳ್ಳಿ ತಾಲೂಕಿನಲ್ಲಿಯೇ 117 ವಿದ್ಯಾರ್ಥಿಗಳಿದ್ದರು.

ಅಂತೆಯೇ, ಎನ್‌ಟಿಎಸ್‌ಇ ಪರೀಕ್ಷೆ ಬರೆಯಲು 10ನೇ ತರಗತಿ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ. ಜತೆಗೆ ಸರ್ಕಾರಿ, ಅನುದಾನಿತ ಶಾಲೆಗಳಂತೆ ಅನುದಾನರಹಿತ ಶಾಲೆ ವಿದ್ಯಾರ್ಥಿಗಳಿಗೂ ಅವಕಾಶವಿರುತ್ತದೆ. ಇವರಿಗೆ ಎರಡು ಹಂತದಲ್ಲಿ ಪರೀಕ್ಷೆ ಆಯೋಜಿಸಲಾಗುತ್ತದೆ. ಉತ್ತೀರ್ಣರಾದವರಿಗೆ ತಾಂತ್ರಿಕ ಶಿಕ್ಷಣ ಹೊರತುಪಡಿಸಿ ವ್ಯಾಸಂಗ ಮಾಡಿರುವವರಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ.

ಇನ್ನು ಶ್ರೀರಂಗಪಟ್ಟಣ, ಮಳವಳ್ಳಿಯಲ್ಲಿ ಮೊದಲ ಹಂತದ ಕಾರ್ಯಾಗಾರ ಪೂರ್ಣಗೊಳಿಸಬೇಕಿದೆ. ಮುಂದಿನ ದಿನಗಳಲ್ಲಿ ‘ಸ್ಪರ್ಧಾ ಕಲಿ’ ಕಾರ್ಯಕ್ರಮದಡಿ ಪ್ರತಿ ತಾಲೂಕಿನಲ್ಲಿ ಎನ್‌ಎಂಎಂಎಸ್‌ಗೆ 50 ಮತ್ತು ಎನ್‌ಟಿಎಸ್‌ಇಗೆ 50 ವಿದ್ಯಾರ್ಥಿಗಳಂತೆ ಒಟ್ಟು 100 ವಿದ್ಯಾರ್ಥಿಗಳಿಗೆ 20 ತರಗತಿಯ ಮೂಲಕ ತರಬೇತಿ ನೀಡಲಾಗುವುದು.

ಚಾಲನೆ: ಗಾಂಧಿಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಡಯಟ್ ಪ್ರಾಂಶುಪಾಲ ಶಿವಮಾದಪ್ಪ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡಿದರು. ಬಿಇಒ ವೆಂಕಟೇಶಯ್ಯ, ಬಿಆರ್‌ಸಿ ಚಂದ್ರಶೇಖರ್, ನೋಡಲ್ ಅಧಿಕಾರಿ ಕಾಂತಾಶ್ರೀ, ಡಯಟ್ ಉಪನ್ಯಾಸಕ ಜಯಶಂಕರ್, ಮುಖ್ಯ ಶಿಕ್ಷಕ ರಾಜಣ್ಣ, ಪ್ರೌಢಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ಅಶೋಕ ಇತರರಿದ್ದರು.

Leave a Reply

Your email address will not be published. Required fields are marked *