ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ ಶಾಸಕ

ಮಂಡ್ಯ: ವಿಷ ಮಿಶ್ರಿತ ನೀರು ಸೇವಿಸಿ ಮಿಮ್ಸ್‌ಗೆ ದಾಖಲಾಗಿರುವ ಎ.ಹುಲ್ಕೆರೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಕುಟುಂಬ ಸದಸ್ಯರಿಗೆ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಧೈರ್ಯ ತುಂಬಿದರು.

ಸೋಮವಾರ ರಾತ್ರಿ 8.30ರಲ್ಲಿ ಮಿಮ್ಸ್‌ಗೆ ಭೇಟಿ ನೀಡಿದ ಅವರು, 11 ಮಕ್ಕಳ ಆರೋಗ್ಯ ಬಗ್ಗೆ ವಿಚಾರಿಸಿದರಲ್ಲದೆ, ಡಿಎಚ್‌ಒ ಡಾ.ಮಂಚೇಗೌಡ, ಮಿಮ್ಸ್ ಮಕ್ಕಳ ತಜ್ಞ ಡಾ.ವಿನಯ್ ಅವರಿಂದ ಮಾಹಿತಿ ಪಡೆದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೀರಿನ ಟ್ಯಾಂಕ್‌ಗೆ ವಿಷ ಮಿಶ್ರಣ ಮಾಡಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಕುಡಿಯುವ ನೀರಿಗೆ ವಿಷ ಬೆರೆಸಿರುವುದು ಅಕ್ಷಮ್ಯ ಅಪರಾಧ. ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಬೇಗನೇ ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ನಾನು ಕೂಡ ತಿಳಿಸಿದ್ದೇನೆ. ಘಟನೆ ಗೊತ್ತಾದ ತಕ್ಷಣ ಸ್ಥಳೀಯರು, ಅಧಿಕಾರಿಗಳು ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ದೇವರ ದಯೆಯಿಂದ ಮಕ್ಕಳೆಲ್ಲರೂ ಪಾರಾಗಿದ್ದಾರೆ. ಅಗತ್ಯ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಬ ಕಲ್ಯಾಣಾಧಿಕಾರಿ ಹಾಗೂ ಮಿಮ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು ಮತ್ತು ಜನ ಜಾನುವಾರುಗಳ ಕುಡಿಯುವ ನೀರಿನ ದೃಷ್ಟಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀರು ಹರಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.

ಮಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ತಹಸೀಲ್ದಾರ್ ನಾಗೇಶ್, ಮುಖಂಡ ಕೊತ್ತತ್ತಿ ರಾಜು ಮೊದಲಾದವರಿದ್ದರು.

Leave a Reply

Your email address will not be published. Required fields are marked *