ಜೆಡಿಎಸ್ ಅಸ್ತಿತ್ವಕ್ಕೆ ಮಂಡ್ಯ ಜನತೆ ಕಾರಣ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಭಿಮತ

ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ
ಪ್ರಾದೇಶಿಕ ಪಕ್ಷ ಜೆಡಿಎಸ್ ಇಂದಿಗೂ ಅಸ್ತಿತ್ವದಲ್ಲಿದೆ ಎಂದರೇ ಕಾರಣ ಮಂಡ್ಯ ಜನತೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಕುಟೀರದಲ್ಲಿ ಬೆಳಗೊಳ, ಕೆ.ಶೆಟ್ಟಹಳ್ಳಿ ಹೋಬಳಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಈ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ನಿಮ್ಮದೆರು ನಿಲ್ಲಲು ಮೊದಲನೇ ಧ್ವನಿ ಎತ್ತಿದ್ದವರು ಶಾಸಕ ರವೀಂದ್ರ ಶ್ರೀಕಂಠಯ್ಯ. ಇವರ ನಂಬಿಕೆ ಮತ್ತು ಜಿಲ್ಲೆಯ ಜನರ ಮೇಲಿನ ಪ್ರೀತಿ ನನಗೆ ಜೆಡಿಎಸ್ ಯಾವ ಜವಾಬ್ದಾರಿ ಕೊಡುತ್ತದೋ ಅದನ್ನು ಬದ್ಧತೆಯಿಂದ ಪ್ರಮಾಣಿಕವಾಗಿ ನಿಭಾಯಿಸಿ ಉಳಿಸಿಕೊಳ್ಳುತ್ತೇನೆ ಎಂದರು.
ನಮ್ಮ ಕುಟುಂಬಕ್ಕೆ ಎಲ್ಲ ಜಿಲ್ಲೆಗಳು ಒಂದೇ. ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 5 ಕ್ಷೇತ್ರ ಗೆಲ್ಲಿಸಿ ಜೆಡಿಎಸ್ ಕೈ ಹಿಡಿದಿದ್ದ ಮಂಡ್ಯ ಜನತೆ ಪುನಃ 2018ರ ಚುನಾವಣೆಯಲ್ಲಿ 7 ಕ್ಷೇತ್ರಗಳನ್ನು ಗೆಲ್ಲಿಸಿ ನಮ್ಮನ್ನು ಬೆಂಬಲಿಸಿದ್ದೀರಿ. ಇದೀಗ ನಿಮ್ಮ ಅಭಿವೃದ್ಧಿಗೆ ಪಣತೊಟ್ಟು ಲೋಕಸಭೆ ಚುನಾವಣೆಗೆ ಜಿಲ್ಲೆಯ 8 ಜನ ಶಾಸಕರು ನನ್ನ ಹೆಸರನ್ನು ಸೂಚಿಸಿ ಅಭ್ಯರ್ಥಿಯಾಗಿ ಎಂದು ಒತ್ತಾಯಿಸಿದ್ದರಿಂದ ನಾನು ಸ್ಪರ್ಧಿಸಿದ್ದೇನೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಡೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ಎರಡು ಪಕ್ಷಗಳ ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮವಹಿಸಲಿದ್ದಾರೆ. ಟೀಕೆ ಟಿಪ್ಪಣಿಗೆ ತಲೆಕೆಡಿಸಿಕೊಳ್ಳದ ನಾನು ನಿಮ್ಮ ಸೇವೆಗೆ ಪ್ರಾಮುಖ್ಯತೆ ನೀಡಲಿದ್ದೇನೆ. ಇದು ನನ್ನ ಗೆಲುವಿಗೆ ಉತ್ತಮ ಸಹಕಾರ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾ.21ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತೇನೆ. ಮಾ.25ರಂದು ಜಿಲ್ಲೆಯ ಕೇಂದ್ರಸ್ಥಾನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಬಳಿಕ ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಬಹಿರಂಗ ಸಭೆಯಲ್ಲಿ ತಿಳಿಸಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಹಿಂದೆ ಜಿಲ್ಲೆಯಿಂದ ಸಂಸದರಾಗಿ 20 ವರ್ಷ ಬಳಿಕ ಸಚಿವರಾಗಿ ಜನರ ಕಷ್ಟ-ಸುಖ ಕೇಳಲಿಲ್ಲ. ಪುಟ್ಟ ಮಕ್ಕಳೊಂದಿಗೆ ಸಮಸ್ಯೆ ಹೊತ್ತು ಮನೆ ಬಾಗಿಲ ಕಾದ ಹೆಣ್ಣು ಮಗಳು, ಜಿಲ್ಲೆಯ ಜನರಿಗೆ ನೀರು ನೆರಳು ಕೊಡದೆ ಜಿಲ್ಲೆಯ ಜನರನ್ನು ಅತೀ ನಿಕೃಷ್ಟವಾಗಿ ಕಂಡ ಕುಟುಂಬ, ಜಿಲ್ಲೆಯ ಹೇಸರೇಳಿಕೊಂಡೇ ದೇಶ, ವಿದೇಶದಲ್ಲಿ ಹೆಸರು ಮಾಡಿದ ಜನರು, ಇದೀಗ ದಿಢೀರ್ ಎಂದು ಜನರ ಮೇಲೆ ಪ್ರೀತಿ ಬಾಂಧವ್ಯ ತೋರಿ ನಿಖಿಲ್ ವಿರುದ್ಧ ಎದುರಾಳಿಯಾಗಿ ಸ್ಪರ್ಧಿಸಲು ಜಿಲ್ಲೆಗೆ ಬಂದಿದ್ದಾರೆ. ಅವರಿಂದ ಸಹಾಯ ಪಡೆದವರು ಯಾರಾದರೂ ಇದ್ದರೆ ತಿಳಿಸಿ, ಜಿಲ್ಲಾ ಕೇಂದ್ರದಲ್ಲಿ ಸನ್ಮಾನ ಮಾಡುತ್ತೇನೆ ಎಂದು ಸುಮಲತಾ ಅಬಂರೀಷ್, ದಿವಂಗತ ಅಂಬರೀಷ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಜನರು ಸಿನಿಮಾ ನಟರನ್ನು ನಂಬುವುದಿಲ್ಲ. ಇಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಜನ ಮನ್ನಣೆಕೊಡುತ್ತಾರೆ. ಜಿಲ್ಲೆಗೆ ಹಿಂದೆಂದೂ ಕೊಟ್ಟಿರದ ಕೊಡುಗೆಯನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊಟ್ಟಿದ್ದಾರೆ. ಹಾಗಾಗಿ ಜನಾಭಿಪ್ರಾಯ ಅವರ ಪರವಾಗಿದೆ. ಹಳ್ಳಿ-ಹಳ್ಳಿಗಳ ರಸ್ತೆಗಳು ಇಂದು ಅಭಿವೃದ್ಧಿಯಾಗುತ್ತಿವೆ. ನೀರಾವರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಸಾಲಮನ್ನಾ ಮಾಡಿದ್ದಾರೆ. ಇವೆಲ್ಲವೂ ರೈತರ ಮನಸ್ಸಿನಲ್ಲಿವೆ. ಕಾರ್ಯಕರ್ತರು ನಿಷ್ಠೆಯಿಂದ ಕೆಲಸಮಾಡಬೇಕು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ, ಮುಖಂಡ ಚಿನ್ನಗಿರಿಕೊಪ್ಪಲು ನಾಗೇಂದ್ರ ಮಾತನಾಡಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್, ಮಂಡ್ಯ ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಜೆಡಿಎಸ್ ರೈತಘಟಕದ ಅಧ್ಯಕ್ಷ ಡಿ.ಎಂ.ರವಿ, ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡ ಮಾತನಾಡಿದರು. ಜೆಡಿಎಸ್ ಯುವ ಜನತಾದಳ ತಾಲೂಕು ಅಧ್ಯಕ್ಷ ಕಡತನಾಳು ಸಂಜಯ್ ಮತ್ತಿತರರಿದ್ದರು.