ಐತಿಹಾಸಿಕ ಕೋಟೆ ಬಳಿಯ ದಿಬ್ಬ ನೆಲಸಮ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿದ್ದು, ಕೋಟೆ ಹಾಗೂ ಕಂದಕಕ್ಕೆ ಹೊಂದಿಕೊಂಡಿರುವ ದಿಬ್ಬವನ್ನು ನೆಲಸಮ ಮಾಡುತ್ತಿದ್ದಾರೆ.

ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕೋಟೆ, ಕಂದಕಕ್ಕೆ ಹೊಂದಿಕೊಂಡಿರುವ ದಿಬ್ಬವನ್ನು ಜೆಸಿಬಿ ಮೂಲಕ ನೆಲಸಮ ಮಾಡುತ್ತಿದ್ದು, ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

100 ಮೀ. ವ್ಯಾಪ್ತಿಯಲ್ಲಿ ಮಣ್ಣು ತೋಡುವುದು, ಕಟ್ಟಡ ನಿರ್ಮಾಣ ಸೇರಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. ಪುರಾತತ್ವ ಇಲಾಖೆಯ ಕಾನೂನು ಉಲ್ಲಂಘಿಸಿದರೆ ದಂಡದೊಂದಿಗೆ ಜೈಲು ಶಿಕ್ಷೆ ದಂಡ ವಿಧಿಸಲಾಗುತ್ತದೆ. 100 ಮೀ. ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳ ಆಸ್ತಿ ಇದ್ದರೂ ಯಥಾಸ್ಥಿಯಲ್ಲಿ ಅನುಭವಿಸಬೇಕೇ ಹೊರತು ಯಾವುದೇ ಅಭಿವೃದ್ಧಿ ಕೈಗೊಳ್ಳುವಂತಿಲ್ಲ. ಆದರೂ ಮಂಜುನಾಥ್ ಎಂಬುವರು ನಿಯಮ ಮೀರಿ ಕಂದಕದ ದಿಬ್ಬ ನೆಲಸಮ ಮಾಡುತ್ತಿದ್ದಾರೆ.

ಪಟ್ಟಣದ ಪುರಸಭೆ ಅಧಿಕಾರಿಗಳು 1972-73ರಲ್ಲಿ ಈ ಸ್ಥಳಕ್ಕೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ದಿಬ್ಬ ನೆಲಸಮ ಮಾಡುತ್ತಿರುವ ಮಂಜುನಾಥ್ ಜಾಗಕ್ಕೆ ಮೂರನೇ ವಾರಸುದಾರರು ಎನ್ನಲಾಗಿದೆ. ಕಾನೂನನ್ನು ಗಾಳಿಗೆ ತೂರಿ ದಿಬ್ಬ ನೆಲಸಮ ಮಾಡುತ್ತಿದ್ದರೂ ರಾಜಕೀಯ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೋಟೆ ಇತಿಹಾಸ: ತಿಮ್ಮಣ್ಣನಾಯಕ ಎಂಬುವರಿಂದ ಸುಮಾರು 450 ವರ್ಷಗಳ ಹಿಂದೆ ಕೋಟೆ ನಿರ್ಮಾಣ ಕೆಲಸ ಆರಂಭವಾಗಿತ್ತು. ಶತೃಗಳ ದಾಳಿ ತಪ್ಪಿಸಲು ಕೋಟೆ ಸುತ್ತ ಕಂದಕ ಹಾಗೂ ಅಗತ್ಯವಿರುವೆಡೆ ದಿಬ್ಬ ನಿರ್ಮಿಸಲಾಗಿತ್ತು. ಕೋಟೆಯನ್ನು ಐತಿಹಾಸಿಕ ಸ್ಮಾರಕ ಎಂದು ಘೋಷಿಸಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪುರಾತತ್ವ ಇಲಾಖೆ ಸ್ಮಾರಕದ ಸುತ್ತ 100 ಮೀ. ವ್ಯಾಪ್ತಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ.

ಸ್ಪಷ್ಟನೆ: ಪುರಸಭೆ ವ್ಯಾಪ್ತಿಗೆ ಒಳಪಡುವ ಖಾತೆ ನಂ.45/45ರ 10 ಗುಂಟೆ ಸ್ಥಳ 1992-1993 ಸಾಲಿನಲ್ಲಿ ಲೇಟ್ ಚೆಲುವಯ್ಯ ಎಂಬುವರ ಹೆಸರಿಗೆ ಅಂದಿನ ಪುರಸಭೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದು, ಅಂದಿನಿಂದ ಇಂದಿನವರೆಗೂ ಮುಂದುವರಿಸಿಕೊಂಡು ಬರಲಾಗಿದೆ. ಆದರೆ ಅಂದು ಪುರಾತತ್ವ ಇಲಾಖೆ ಕಾಯ್ದೆಯು ಕಾನೂನಿನ ಮಾದರಿಯಲ್ಲಿ ಜಾರಿಯಾಗಿರಲಿಲ್ಲ. ಇಂದು ಪುರಾತ್ವತ್ವ ಇಲಾಖೆಗೆ ಸಂಬಂಧಿಸಿದ ಸ್ಮಾರಕ ಮತ್ತು ಕಟ್ಟಡಗಳಿಂದ 100 ಮೀಟರ್ ಅಂತರದಲ್ಲಿನ ಯಾವ ಕಟ್ಟಡಗಳಿಗೂ ಅನುಮತಿ ಮತ್ತು ಮಾನ್ಯತೆ ನೀಡುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.