‘ಸಿರಿಗೆ ಸೆರೆ’ ಪ್ರದರ್ಶನಕ್ಕೆ ಸಜ್ಜು

ಮಂಡ್ಯ: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರನ್ನು ಕುರಿತ ‘ಸಿರಿಗೆ ಸೆರೆ’ ನಾಟಕವನ್ನು ಜನರೆದುರು ಪ್ರದರ್ಶಿಸಲು ಜಿಲ್ಲೆಯ ಕಲಾವಿದರು ಸಜ್ಜುಗೊಂಡಿದ್ದು, ಜು.20 ಮತ್ತು 21ರಂದು ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.

ಸ್ಥಳೀಯ 22 ಕಲಾವಿದರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದು, ಪ್ರದರ್ಶನ ಯಶಸ್ವಿಗೊಳಿಸಲು ಯುವ ನಿರ್ದೇಶಕ ಧಾರವಾಡದ ಉಮೇಶ ಪಾಟೀಲ ಅವರ ನಿರ್ದೇಶನದಲ್ಲಿ ಪ್ರತಿದಿನ 4 ರಿಂದ 6 ಗಂಟೆ ತಾಲೀಮು ನಡೆಸುತ್ತಿದ್ದಾರೆ.

ಹೊಸ, ಹಳೆ ಕಲಾವಿದರ ಸಂಗಮ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಮಂಡ್ಯ ಕರ್ನಾಟಕ ಸಂಘದಿಂದ ಆಯೋಜಿಸಿರುವ ನಾಟಕವನ್ನು ಸಂಘದ ಆವರಣದಲ್ಲಿ ಒಂದೂವರೆ ತಿಂಗಳಿನಿಂದ ಅಭ್ಯಾಸ ಮಾಡಲಾಗುತ್ತಿದೆ. ನಾಡಪ್ರಭು ಕೆಂಪೇಗೌಡ ಅವರನ್ನು ಕುರಿತು ಜಯರಾಮ್ ರಾಯಪುರ ರಚಿಸಿರುವ ಸಿರಿಗೆ ಸೆರೆ ನಾಟಕವನ್ನು ಹೊಸ ಮತ್ತು ಹಳೆಯ ಕಲಾವಿದರು ಕೂಡಿ ಪ್ರದರ್ಶನ ನೀಡಲಿದ್ದಾರೆ. ಅಂತೆಯೇ, ವೃತ್ತಿ ಕಲಾವಿದರು, ರೈತ, ನೌಕರ, ಭತ್ತದ ವ್ಯಾಪಾರಿ, ಪತ್ರಬರಹಗಾರ, ದೈಹಿಕ ಶಿಕ್ಷಣ ಶಿಕ್ಷಕಿ, ಕ್ಷಕಿರಣ ತಂತ್ರಜ್ಞ ಮತ್ತು ಮೂರ‌್ನಾಲ್ಕು ವಿದ್ಯಾರ್ಥಿಗಳು ಕೂಡ ಪಾತ್ರ ನಿರ್ವಹಿಸಲಿದ್ದಾರೆ.

ಸುಮಾರು ಎರಡೂವರೆ ಲಕ್ಷ ರೂ. ವೆಚ್ಚದ ಬಜೆಟ್‌ನಲ್ಲಿ ನಾಟಕ ಸಿದ್ಧಗೊಂಡಿದ್ದು, ಎರಡು ದಿನ ರಾತ್ರಿ 7 ಗಂಟೆಗೆ ಪ್ರದರ್ಶನ ನಡೆಯಲಿದೆ. 1 ಗಂಟೆ 40 ನಿಮಿಷ ಪ್ರದರ್ಶನವಿರಲಿದೆ. ಪ್ರವೇಶ ಉಚಿತವಾಗಿದ್ದು, ಕೆಂಪೇಗೌಡ ಅವರ ಆಡಳಿತವನ್ನು ಕಲಾವಿದರ ಮೂಲಕ ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಅವಕಾಶವಿದೆ. ನಾಟಕಕ್ಕೆ ತಬಲ ಕೃಷ್ಣಮೂರ್ತಿ, ಹುರುಗಲವಾಡಿ ರಾಮಯ್ಯ, ನಿಶ್ಚಯ್ ಸಂಗೀತ ನೀಡಲಿದ್ದು, ಮಹೇಶ್ ಹೆಬ್ಬಾಳ ವಸ್ತ್ರವಿನ್ಯಾಸ ಮಾಡಲಿದ್ದಾರೆ. ಕಲಬುರುಗಿಯ ಮಂಜುನಾಥ ಶಿಂಧೆ ರಂಗಸಜ್ಜಿಕೆ ಮಾಡಲಿದ್ದಾರೆ. ಜಗದೀಶ್ ಸಹಾಯಕ ನಿರ್ದೇಶಕರಾಗಿದ್ದಾರೆ.

20ರಂದು ವಿಚಾರ ಮಂಡನೆ: ನಾಡಪ್ರಭು ಕೆಂಪೇಗೌಡ ಅವರನ್ನು ಕುರಿತಂತೆ ಸ್ಥಳೀಯ ಕಲಾವಿದರ ಮೂಲಕ ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ದರಿಂದ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜು.20ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮಧ್ಯಾಹ್ನ 3ಗಂಟೆಗೆ ‘ಸಿರಿಗೆ ಸೆರೆ’ ನಾಟಕ ಕುರಿತಂತೆ ವಿಚಾರ ಮಂಡನೆ ಆಯೋಜಿಸಲಾಗಿದೆ. ಬೆಂಗಳೂರು ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಹಾಗೂ ಪುರಾತತ್ವ ಇಲಾಖೆ ನಿರ್ದೇಶಕ ಆರ್.ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಂಪೇಗೌಡ ಅವರನ್ನು ಕುರಿತು ಸಂಶೋಧಕ ತಲಕಾಡು ಚಿಕ್ಕರಂಗೇಗೌಡ ಮತ್ತು ನಾಟಕ ಕುರಿತು ನಾಟಕಕಾರ ಪ್ರೊ.ಎಚ್.ಎಸ್.ಉಮೇಶ್ ಮಾತನಾಡಲಿದ್ದಾರೆ ಎಂದು ವಿವರಿಸಿದರು.

 

Leave a Reply

Your email address will not be published. Required fields are marked *