ಟಿಪ್ಪು ಜಯಂತಿ: ಶಾಂತಿ ಸಭೆಯಲ್ಲಿ ಮಂಡ್ಯ ಎಸ್‌ಪಿ ಗರಂ

ಮಂಡ್ಯ: ಟಿಪ್ಪು ಜಯಂತಿ ಆಚರಣೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಂಡ್ಯದಲ್ಲಿ ನಡೆದ ಶಾಂತಿಸಭೆಯಲ್ಲಿ ಮುಖಂಡರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗರಂ ಆಗಿದ್ದಾರೆ.

ಮಂಡ್ಯದಲ್ಲಿ ಹಿಂದು-ಮುಸ್ಲಿಂ ಮುಖಂಡರೊಂದಿಗೆ ಎಸ್‌ಪಿ ಶಿವಪ್ರಕಾಶ್ ಶಾಂತಿ ಸಭೆ ಆಯೋಜಿಸಿದ್ದರು. ಈ ವೇಳೆ ಸಭೆಯಲ್ಲಿ ಗದ್ದಲ ಉಂಟು ಮಾಡಿದ್ದಕ್ಕೆ ಗರಂ ಆಗಿರುವ ಎಸ್‌ಪಿ, ಎಷ್ಟು ಸಲ ಹೇಳಬೇಕು? ಸಮ್ಮನೆ ಕುಳಿತುಕೊಳ್ಳಿ. ನನ್ನ ಜತೆ ಜಗಳ‌ಮಾಡುವ ಉದ್ದೇಶವಿದ್ದವರು ಎದ್ದು ನಿಲ್ಲಿ. ನಾನು ಏನು ಎಂದು ತೋರಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಣೆಗೆ ಸಭೆ ಕರೆಯಲಾಗಿದೆ. ನೀವು ಸಭೆಯಲ್ಲಿ ಗದ್ದಲ ಉಂಟು ಮಾಡುವುದು ಸರಿಯಲ್ಲ ಎಂದು ಸಭಿಕರ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ರಾಜ್ಯದಲ್ಲಿ ನ. 10ರಂದು ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 3 ದಿನಗಳ ಕಾಲ ಅಂದರೆ ನ. 9ರ ಬೆಳಗ್ಗೆಯಿಂದ ನ. 11ರ ಸಂಜೆವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣದ ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್)