ಬಿಜೆಪಿ ನಿರಶನ ಮುಂದುವರಿಕೆ

ಮಂಡ್ಯ: ಹಾಲಿನ ಬೆಲೆ ಕಡಿತ, ದಲ್ಲಾಳಿಗಳು ಖರೀದಿಸಿರುವ ಭತ್ತಕ್ಕೆ ಪರಿಹಾರ, ಕಬ್ಬಿನ ಬೆಲೆ ನಿಗದಿ ಹಾಗೂ ಬಟವಾಡೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ಹಮ್ಮಿಕೊಂಡಿರುವ ಅನಿರ್ಧಿಷ್ಟ ಉಪವಾಸ 2ನೇ ದಿನ ಪೂರೈಸಿದೆ.

ಭಾನುವಾರದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ವಿವಿಧ ಬೇಡಿಕೆಗಳ ಜತೆಗೆ ವಿಧಾನಸೌಧದ ಕಚೇರಿಯಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಆಗಮಿಸಿ ಸಮಸ್ಯೆ ಪರಿಹಾರಕ್ಕೆ ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ನೀವು ಸಭೆಗೆ ಬನ್ನಿ ಇಂದು ನಿರಶನ ಕೈ ಬಿಡುವಂತೆ ಮನವಿ ಮಾಡಿದರು.

ಅದಕ್ಕೆ ಒಪ್ಪದ ಶಿವಣ್ಣ, ಈ ಸಮಸ್ಯೆಗಳನ್ನು ಪರಿಹರಿಸಲು ಮೊದಲೇ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನಿರ್ಲಕ್ಷೃ ಮಾಡಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಘೋಷಿಸಿದ ನಂತರ ನಿರಶನ ಕೈ ಬಿಡುತ್ತೇವೆ ಎಂದರು.

ಕಬ್ಬಿನ ದರ ನಿಗದಿ ಮಾಡಿಲ್ಲ. ಕಾರ್ಖಾನೆಗಳು ರೈತರಿಗೆ ಬಟವಾಡೆ ಮಾಡುತ್ತಿಲ್ಲ. ಕಬ್ಬು ಸಾಗಣೆ ಮಾಡಿ ಎರಡು-ಮೂರು ತಿಂಗಳಾಗಿದ್ದು, ಕಾರ್ಖಾನೆಗಳು ಹಣ ಕೊಡುತ್ತಿಲ್ಲ. ಸರ್ಕಾರದ ಸಾಲಮನ್ನಾ ಗೊಂದಲ, ಜತೆಗೆ ಖಾಸಗಿ ಸಾಲ ನೀಡದಂತೆ ಮುಖ್ಯಮಂತ್ರಿ ಹೇಳಿರುವುದರಿಂದ ರೈತರಿಗೆ ಸಾಲ ಸಿಗುತ್ತಿಲ್ಲ. ಇದರಿಂದಾಗಿ ರೈತರ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ರೈತರ ರಕ್ಷಣೆಗೆ ಬರುವ ತನಕ ಉಪವಾಸ ಕೈ ಬಿಡುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಸಿ.ಟಿ.ಮಂಜುನಾಥ್, ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕೆಂಬ ಕೂಗಿಗೆ ಯಾಕೆ ಸಿಎಂ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದಾಗ ಈಗ ನಿಷೇಧವಾಗಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು. ಅದಕ್ಕೆ ಶಾಶ್ವತವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದಾಗ ನಮಗೆ ಕಾವೇರಿ ಮುಖ್ಯ ಎಂದು ಉತ್ತರಿಸಿದರು.

ಮಾತು ಮುಂದುವರಿಸಿದ ಮಂಜುನಾಥ್, ದೇವೇಗೌಡರು ಮಂಡ್ಯ ಒಂದು ಕಣ್ಣು ಹಾಸನ ಒಂದು ಕಣ್ಣು ಎನ್ನುತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿಗೆ 28 ರೂ. ಇದೆ. ನಮ್ಮಲೇಕೆ 20ರೂ. ಕೊಡುತ್ತಿದ್ದೀರಿ, ಮಂಡ್ಯದ ಜನ ಏನು ಪಾಪ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಹಾಲಿನ ದರದ ಬಗ್ಗೆ ನಾಳಿನ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಹೊನ್ನಪ್ಪ, ಮಲ್ಲಿಕಾರ್ಜುನ್, ಅಶೋಕ್‌ಕುಮಾರ್, ವರದರಾಜು, ಸುರೇಶ್, ಇಂಡುವಾಳು ನವೀನ್ ಮೊದಲಾದವರು ಪಾಲ್ಗೊಂಡಿದ್ದರು.