ಕೊಂಚ ನೆಮ್ಮದಿ ತಂದ ಆದೇಶ

ಮಂಡ್ಯ: ಒಳಹರಿವಿನ ಪ್ರಮಾಣ ಹೆಚ್ಚಾದರೆ ಮಾತ್ರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಗಳವಾರ ಆದೇಶ ನೀಡಿರುವುದು ಸ್ವಲ್ಪ ನೆಮ್ಮದಿ ವಿಷಯವಾಗಿದೆ. ಇತ್ತ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಧರಣಿ ಐದನೇ ದಿನ ಪೂರೈಸಿದೆ.

ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ನಡೆಯುತ್ತಿರುವ ಧರಣಿಗೆ ವಿವಿಧೆಡೆಯಿಂದ ರೈತರು ಭಾಗವಹಿಸಿದ್ದರು. ಅಂತೆಯೆ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು. ಇನ್ನು ನೀರು ಬಂದರಷ್ಟೇ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದರಿಂದ ಬೆಳೆಗೆ ನೀರು ಹರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಒಣಗುತ್ತಿರುವ ಬೆಳೆಯನ್ನು ಉಳಿಸಿಕೊಳ್ಳಲು ಕೆಆರ್‌ಎಸ್ ಮತ್ತು ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು. ಸತತ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಇದೀಗ ಸುಮಾರು 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬಿಗೆ ನೀರಿನ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಐದು ದಿನದಿಂದ ಧರಣಿ ನಡೆಸಲಾಗುತ್ತಿದೆ. ಈವರೆಗೆ ಜಿಲ್ಲೆಯ ಶಾಸಕರು, ಸಚಿವರು ಸ್ಥಳಕ್ಕೆ ಬಂದು ರೈತರ ಕಷ್ಟ ಕೇಳಿಲ್ಲ. ನೀರು ಕೇಳಿದರೆ ಪ್ರಾಧಿಕಾರದ ಕಡೆ ಬೆರಳು ತೋರಿಸುತ್ತಿದ್ದರು. ಇದೀಗ ಪ್ರಾಧಿಕಾರವೇ ಒಳಹರಿವು ಬಂದರಷ್ಟೇ ನೀರು ಕೊಡಿ ಎಂದಿರುವಾಗ, ಡ್ಯಾಂನಲ್ಲಿರುವ ನೀರನ್ನು ಬೆಳೆಗೆ ಬಳಸಿಕೊಳ್ಳಬಹುದು ಮತ್ತು ಕುಡಿಯುವ ನೀರಿಗೂ ಸಮಸ್ಯೆಯಾಗುವುದಿಲ್ಲ. ಆದ್ದರಿಂದ, ಇನ್ಯಾವುದೇ ಸಬೂಬು ಹೇಳದೇ ಡ್ಯಾಂನಿಂದ ನೀರು ಬಿಡುಗಡೆ ಮಾಡಬೇಕು. ಇನ್ನು ನೀರು ಹರಿಸುವವರೆಗೂ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಜಿ.ಎಸ್.ಲಿಂಗಪ್ಪಾಜಿ, ಬಿ.ಬೊಮ್ಮೇಗೌಡ, ಅಶೋಕ್‌ಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *