ಪರಿಸರ ಸ್ನೇಹಿ ಉದ್ಯಮಕ್ಕಿಲ್ಲ ಯಶಸ್ಸು

ಮಂಡ್ಯ: ಪರಿಸರ ನಾಶದ ಉದ್ಯಮ ಯಶಸ್ವಿಯಾಗುತ್ತಿರುವಂತೆ ಪರಿಸರ ಸ್ನೇಹಿ ಉದ್ಯಮ ಯಶಸ್ಸು ಕಾಣುತ್ತಿಲ್ಲ ಎಂದು ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ಖಾದಿ ಗ್ರಾಮೋದ್ಯೋಗ ಪ್ರತಿಪಾದಕ ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ನವದೆಹಲಿಯ ವಿಶ್ವ ಯುವಕ ಕೇಂದ್ರದ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿರುವ ಪರಿಸರ ಸ್ನೇಹಿ-ಹಸಿರು ಉದ್ದಿಮೆಗಳ ಕುರಿತು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಣ್ಣ-ಮಧ್ಯಮ ಉದ್ದಿಮೆದಾರರ ‘ರಾಜ್ಯಮಟ್ಟದ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.

ಪರಿಸರ ಸ್ನೇಹಿ ಉದ್ಯಮ ಯಶಸ್ವಿಯಾಗದಿರುವುದಕ್ಕೆ ನೈಪುಣ್ಯತೆ, ಆಡಳಿತ ಹಾಗೂ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗದಿರುವುದೇ ಕಾರಣ. ಹಳ್ಳಿ ಕೈಗಾರಿಕೆ ಉಳಿಯಬೇಕಾದರೆ ಗ್ರಾಮೀಣ ಜನರಲ್ಲಿರುವ ಪಾರಂಪರಿಕ ಕೌಶಲವನ್ನು ಮೊದಲು ಗುರುತಿಸಬೇಕು. ಉತ್ಪಾದನೆ, ತಂತ್ರಜ್ಞಾನ, ಮಾರುಕಟ್ಟೆ ವ್ಯವಸ್ಥೆ ತಿಳಿದುಕೊಂಡಾಗ ಪರಿಸರ ಸ್ನೇಹಿ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ನಗರ ಮತ್ತು ಹಳ್ಳಿಗಳು ವ್ಯವಸ್ಥೆಯ ದೃಷ್ಟಿಯಿಂದ ಪರಸ್ಪರ ಶತ್ರುಗಳಾಗಿವೆ. ಇವೆರಡೂ ಪ್ರದೇಶದ ಜನರು ಸ್ನೇಹಿಗಳಾಗಿ ಕೆಲಸ ಮಾಡಿದರೆ ಪರಿಸರ ಸ್ನೇಹಿ ಉದ್ಯಮ ರೂಪಿಸಬಹುದು. ಇಂದು ಪರಿಸರ ನಾಶ ಹಳ್ಳಿಯವರಿಗಿಂತ ನಗರದವರನ್ನು ಹೆಚ್ಚು ಕಾಡುತ್ತಿದೆ. ಇಂತಹ ಸಮಯದಲ್ಲಿ ನಗರದ ಜನರಲ್ಲಿರುವ ವ್ಯವಸ್ಥೆ, ತಂತ್ರಜ್ಞಾನ, ಕೌಶಲ, ಹಣವನ್ನು ಹಳ್ಳಿಯವರಿಗೆ ನೀಡುವ ಮೂಲಕ ಗ್ರಾಮೀಣ ಜನರ ಅನುಭವವನ್ನು ನಗರದವರು ಪಡೆದು ಇಬ್ಬರೂ ಶ್ರೀಮಂತರಾಗಬೇಕು. ಈ ಕೊಡು-ಕೊಳ್ಳುವುದು ಚಳವಳಿಯಾಗಿ ರೂಪುಗೊಂಡಾಗ ಗ್ರಾಮ ಸ್ವರಾಜ್ಯ ಚಳವಳಿಗೆ ಹೊಸ ಶಕ್ತಿ ಬರುತ್ತದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಹಳ್ಳಿ ಜನರು ತಮ್ಮ ಮಕ್ಕಳನ್ನು ಪೇಟೆಗೆ ಕಳುಹಿಸುವ ಮೂಲಕ ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಗ್ರಾಮೀಣ ಜನರು ಅನುಭವ, ಧೈರ್ಯ ಕಳೆದುಕೊಂಡಿದ್ದಾರೆ. ನಗರ ಪ್ರದೇಶದಲ್ಲಿರುವ ಯುವಕರು ಹಳ್ಳಿಗಳ ಕಡೆಗೆ ಹೋಗಲು ಬಯಸುತ್ತಿದ್ದಾರೆ. ಇಂತಹದೊಂದು ಅಸಮತೋಲನವಾಗಬಾರದು. ನಗರದ ಯುವಕರಿಗೆ ಗ್ರಾಮ ಸ್ವರಾಜ್ಯದಂತಹ ರಚನಾತ್ಮಕ ಚಳವಳಿ, ಪರಿಸರ ಸ್ನೇಹಿ ಉದ್ಯಮ ಸಂಘ ಆಧಾರವಾಗಬೇಕು ಎಂದು ನುಡಿದರು.

ಚೆನ್ನೈನ ಸೌತ್ ಇಂಡಿಯನ್ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಕೆ.ಪಂಚಾಕ್ಷರಂ ಮಾತನಾಡಿ, ಉದ್ಯಮದ ಮೂಲ ಉದ್ದೇಶ ಕೇವಲ ಲಾಭವಾಗಬಾರದು. ಬದಲಿಗೆ ಪರಿಸರದ ಜತೆ ಸ್ನೇಹವಾಗಿರುವ ಉದ್ಯಮವಿರಬೇಕು. ನಂತರ ಲಾಭದ ಉದ್ದೇಶವಿರಬೇಕು ಎಂದು ಹೇಳಿದರು.

ನಲವತ್ತು ವರ್ಷದ ಹಿಂದೆ ಉದ್ಯಮವನ್ನು ತತ್ವಾಧಾರಿತವಾಗಿ ಮಾಡಲಾಗುತ್ತಿತ್ತು. ಯಾವುದೇ ಅವ್ಯವಹಾರ ತೋರಿಸದೆ ತತ್ವ ಇಟ್ಟುಕೊಂಡು ವ್ಯವಹಾರ ನಡೆಸುವುದು ಮೂಲ ಗುರಿಯಾಗಿತ್ತು. ಉತ್ತಮ ಗುಣಮಟ್ಟದೊಂದಿಗೆ ನ್ಯಾಯ ಸಮ್ಮತ ಬೆಲೆಗೆ ವಸ್ತುಗಳನ್ನು ನೀಡಿದಾಗ ಗ್ರಾಹಕ ಉದ್ಯಮಿಗಾಗಿ ಕಾಯುತ್ತಾನೆ. ಇದರಿಂದ ಉದ್ಯಮಿಗೆ ಜನಮಾನಸದಲ್ಲಿ ಗೌರವವೂ ಹೆಚ್ಚುತ್ತದೆ ಎಂದು ನುಡಿದರು.

ವಿಕಸನ ಸಂಸ್ಥೆ ಗೌರವಾಧ್ಯಕ್ಷ ಪ್ರೊ.ಆರ್.ಎಲ್.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸೆಲ್ಕೊ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್‌ನ ಸಹಾಯಕ ಮಹಾಪ್ರಬಂಧಕ ಗುರುಪ್ರಕಾಶ್ ಶೆಟ್ಟಿ, ಕರ್ನಾಟಕ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆಂಜನೇಯರೆಡ್ಡಿ, ನವದೆಹಲಿ ವಿಶ್ವ ಯುವಕ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ್. ಡಾ.ಮಲ್ಲಮ್ಮ ಯಳ್ವಾರ್, ಡಾ.ಅನಿತಾ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು ಇದ್ದರು.

 

Leave a Reply

Your email address will not be published. Required fields are marked *