ಮನೆ ನಿರ್ಮಾಣಕ್ಕೆ ಕೆಲವರಿಂದ ಅಡ್ಡಿ

ಮಂಡ್ಯ: ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮೇಲುಕೋಟೆ ರಸ್ತೆ ಬಳಿ ಮನೆ ನಿರ್ಮಿಸುವ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ನಗರಸಭೆ ಕಚೇರಿ ಆವರಣದಲ್ಲಿ ಜಮಾಯಿಸಿದ ಪೌರಕಾರ್ಮಿಕರು, ಕೆಲ ಕಾಲ ಧರಣಿ ನಡೆಸಿದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಹೋದ ಸಂದರ್ಭದಲ್ಲಿ ಅಕ್ಕಪಕ್ಕದ ಕಿಡಿಗೇಡಿಗಳು ದುರುದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ. ಇಡೀ ನಗರವನ್ನೇ ಸ್ವಚ್ಛ ಹಾಗೂ ಸುಂದರವನ್ನಾಗಿಸಲು ಪೌರಕಾರ್ಮಿಕರು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದೇವೆ. ಗುಡಿಸಲುಗಳಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರಿಗಾಗಿ ಮನೆ ನಿರ್ಮಿಸಿಕೊಳ್ಳಲು ತೊಂದರೆ ಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಗೃಹಭಾಗ್ಯ ಯೋಜನೆ ವಿಫಲವಾಗುವುದರ ಜತೆಗೆ ಪೌರಕಾರ್ಮಿಕರು ಸೂರಿಲ್ಲದೆ ಕೊಳಚೆ ಪ್ರದೇಶದ ಶೆಡ್‌ಗಳಲ್ಲೇ ವಾಸ ಮಾಡುವಂತಹ ಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಯೋಜನೆ ಮುಂದುವರಿಸದೆ ತಾತ್ಸಾರ ತೋರುವ ಅಧಿಕಾರಿಗಳು ಹಾಗೂ ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪ್ರಕಾಶ್, ಮುಖಂಡರಾದ ರಾಜು, ಕೃಷ್ಣ, ಸುಶೀಲಮ್ಮ, ಮಹದೇವ, ಮುತ್ತಾಲಯ್ಯ, ನಂಜುಂಡ, ಪಾರ್ವತಮ್ಮ, ನಾರಾಯಣ, ಹರೀಶ, ವೆಂಕಟೇಶ, ಸುನಂದ, ರುದ್ರಮ್ಮ, ಮೀನಾ ಇತರರಿದ್ದರು. ಪೌರ ಕಾರ್ಮಿಕರಿಗೆ ನಡೆಸಿದ ಪ್ರತಿಭಟನೆಗೆ ನಗರಸಭೆಯ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಪೌರಕಾರ್ಮಿಕರು ಬೆಂಬಲ ಸೂಚಿಸಿದರು.

 

Leave a Reply

Your email address will not be published. Required fields are marked *