More

    ನೌಕರರನ್ನು ವಜಾಗೊಳಿಸಲು ಸೂಚನೆ

    ಮಂಡ್ಯ: ಪಾಂಡವಪುರ ಮತ್ತು ಮದ್ದೂರು ಪುರಸಭೆಯಲ್ಲಿ ಪೌರ ಕಾರ್ಮಿಕ ಹುದ್ದೆಗೆ ನೇಮಕಗೊಂಡು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೂವರನ್ನು ಕೆಲಸದಿಂದ ವಜಾಗೊಳಿಸುವಂತೆ ರಾಷ್ಟ್ರೀಯ ಸಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಸೂಚನೆ ನೀಡಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಯಿ ಕರ್ಮಚಾರಿಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಪಾಂಡವಪುರ ಪುರಸಭೆಯಲ್ಲಿ ಇಬ್ಬರು ಹಾಗೂ ಮದ್ದೂರು ಪುರಸಭೆಯಲ್ಲಿ ಒಬ್ಬರು ಪೌರ ಕಾರ್ಮಿಕ ಹುದ್ದೆಗೆ ನೇಮಕವಾಗಿದ್ದಾರೆ. ಆದರೆ, ಇವರು ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಕಳೆದ ವರ್ಷ ನಡೆಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲೇ ಸಂಬಂಧಿಸಿದ ನೌಕರರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೆ. ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲವೇಕೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ ಅವರನ್ನು ಪ್ರಶ್ನಿಸಿದರು.
    ಈ ವಿಚಾರದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಗಮನಹರಿಸಿ ಕ್ರಮ ವಹಿಸಬೇಕು ಎಂದು ಯೋಜನಾ ನಿರ್ದೇಶಕರು ಹೇಳಿದಾಗ, ಯೋಜನಾ ನಿರ್ದೇಶಕರಾಗಿ ನೀವಿರುವುದೇಕೆ ? ನೀವು ಏಕೆ ಕ್ರಮ ವಹಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಬೇರೆ ಜಾತಿಯವರು ಎಂಬ ಕಾರಣಕ್ಕೆ ಆ ಮೂವರನ್ನು ಕಚೇರಿಯೊಳಗೆ ಸೇರಿಸಿಕೊಂಡಿದ್ದೀರಿ. ಅವರನ್ನು ಕೂಡಲೇ ಕೆಲಸದಿಂದ ತೆಗೆದುಹಾಕಬೇಕು. ಅವರ ಜಾಗಕ್ಕೆ ಅರ್ಹರನ್ನು ನೇಮಕ ಮಾಡಬೇಕು. ಈ ಕುರಿತು ತೆಗೆದುಕೊಂಡಿರುವ ಕ್ರಮದ ವರದಿಯನ್ನು ಕಳುಹಿಸಬೇಕೆಂದು ಸೂಚಿಸಿದರು.
    ಕುಟುಂಬದವರು ವಾಸಿಸಲು ಸಾಧ್ಯವೇ:
    ಸಾಯಿ ಕರ್ಮಚಾರಿಗಳ ಕುಟುಂಬ ದೊಡ್ಡದಿರುತ್ತದೆ. ಆ ಒಂದು ಕುಟುಂಬ ವಾಸಿಸಲು 5 ಚದರ ಅಡಿ ಮನೆ ಸಾಲುವುದೇ ಎಂದು ಸದಸ್ಯ ಜಗದೀಶ್ ಹಿರೇಮಣಿ ಅಧಿಕಾರಿಗಳನ್ನು ಪ್ರಶ್ನಿಸಿದರು.
    ನಗರಸಭೆ ಆಯುಕ್ತ ಲೋಕೇಶ್ ಮಾತನಾಡಿ, ನಗರದ ಸಂತೆ ಮೈದಾನದ ಬಳಿ ಪೌರ ಕಾರ್ಮಿಕರಿಗೆ ಜಿ+3 ಮನೆ ಕಟ್ಟಿಕೊಟ್ಟಿರುವ ಕುರಿತು ವಿವರಣೆ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸದಸ್ಯರು, ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಮನೆ ಕಟ್ಟಿಕೊಡಬೇಕೆಂಬುದು ನಮ್ಮ ಆಶಯ. ಒಂದೊಂದು ಕುಟುಂಬದಲ್ಲಿ ಏಳೆಂಟು ಜನರಿರುತ್ತಾರೆ. ಅವರಿಗೆ ಐದು ಚದರಡಿ ಮನೆ ಸಾಲುವುದಿಲ್ಲ. ಈಗ ಮಾಡಿರುವ ಯೋಜನೆ ಪೂರ್ಣಗೊಳಿಸಿ ಮುಂದೆ ಅವರಿಗೆ 20*30ಅಡಿ ಅಳತೆಯ ನಿವೇಶನ ಕೊಟ್ಟು ಪ್ರತ್ಯೇಕವಾಗಿ ಮನೆ ನಿರ್ಮಿಸಲು ಅವಕಾಶವಾಗುವಂತೆ ಯೋಜನೆ ರೂಪಿಸುವಂತೆ ತಿಳಿಸಿದರು.
    ನಗರದ ಒಳಭಾಗದಲ್ಲಿ ಅಷ್ಟೊಂದು ಜಾಗ ಸಿಗುವುದು ಕಷ್ಟ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದಾಗ, ನಗರದಿಂದ ಹೊರಗಾದರೂ ಜಾಗ ಸಿಗಲಿದೆಯೇ ನೋಡಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
    ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ಗ್ಲೌಸ್ ಹಾಗೂ ಶೂಗಳು ಗುಣಮಟ್ಟದಿಂದ ಕೂಡಿಲ್ಲ. ಒಂದೆರಡು ತಿಂಗಳಲ್ಲೇ ಹಾಳಾಗುತ್ತಿವೆ. ಅವುಗಳನ್ನು ಬಳಸುವುದರಿಂದ, ಸ್ವಚ್ಛತಾ ಕಾರ್ಯಕ್ಕೆ ಬರಿಗೈ ಉಪಯೋಗಿಸುತ್ತಿರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿವಿಧ ಸಂಘಟನೆಯ ಮುಖಂಡರು ಹೇಳಿದರು. ಡಿಸಿ ಮಾತನಾಡಿ, ಈ ಬಗ್ಗೆ ಮುಖ್ಯಾಧಿಕಾರಿಗಳು ಗಮನಹರಿಸುವುದರ ಜತೆಗೆ ಸ್ವಚ್ಛತೆ ಮಾಡಲು ನೀಡಲಾಗಿರುವ ಸಲಕರಣೆಯನ್ನು ತಪ್ಪದೇ ಬಳಸುವಂತೆ ಸೂಚಿಸಬೇಕು ಎಂದರು.
    ಸಭೆಯಲ್ಲಿ ಎಎಸ್ಪಿ ಡಾ.ಶೋಭಾರಾಣಿ, ಜಿ.ಪಂ ಯೋಜನಾ ನಿರ್ದೇಶಕ ಧನುಷ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗಯ್ಯ, ಸಂಘಟನೆಗಳ ಮುಖಂಡರಾದ ವೆಂಕಟಗಿರಿಯಯ್ಯ, ಎಂ.ಬಿ.ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts