ಭತ್ತದ ರಾಶಿಗೆ ಸಿಎಂ ಪೂಜೆ

ಮಂಡ್ಯ/ಪಾಂಡವಪುರ: ಆಗಸ್ಟ್ 11ರಂದು ನಾಟಿ ಮಾಡಿದ್ದ ಭತ್ತವನ್ನು ಶುಕ್ರವಾರ ಕೊಯ್ಲು ಮಾಡಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕೊಯ್ಲು ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದು 5.50ಕ್ಕೆ. ನಂತರ ಸೀತಾಪುರದ ಆಂಜನೇಯಸ್ವಾಮಿ ದೇವಾಲಯ ಬಳಿಯಿಂದ ಕಾರೇಕುರಕ್ಕೆ ಸಂಪರ್ಕ ಕಲ್ಪಿಸುವ 78 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಸಿಎಂ ಆಗಮಿಸುವ ಮೊದಲೇ 3 ಎಕರೆ ಭತ್ತವನ್ನು ಕೊಯ್ಲು ಮಾಡಿ ರಾಶಿ ಮಾಡಲಾಗಿತ್ತು. ಗದ್ದೆಗಿಳಿದ ಕುಮಾರಸ್ವಾಮಿಗೆ ಸಂಸದ ಎಲ್.ಆರ್.ಶಿವರಾಮೇಗೌಡ ಕುಡುಗೋಲು ಕೊಡಲು ಮುಂದಾದರು. ಕುಡುಗೋಲು ನಿರಾಕರಿಸಿದ ಸಿಎಂ, ಭತ್ತದ ಪೈರಿನ ಮೇಲಿರಿಸಿ ಪೂಜೆ ಸಲ್ಲಿಸಿದರು. ಸೂರ್ಯ ಮುಳುಗಿದ ನಂತರ ಕೊಯ್ಲು ಮಾಡಬಾರದು ಎಂಬ ಕಾರಣದಿಂದ ಸಿಎಂ ಕುಡುಗೋಲು ಪಡೆಯಲು ನಿರಾಕರಿಸಿದರು ಎಂಬ ಮಾತುಗಳು ಕೇಳಿಬಂದವು.

ಕೊಯ್ಲು ಸ್ಥಗಿತ: ಬೆಳಗ್ಗೆಯಿಂದ ಕೊಯ್ಲಿಗಾಗಿ ಆಗಮಿಸಿದ್ದ ಕೃಷಿ ಕಾರ್ವಿುಕರು, ಕೊಯ್ಲು ನೋಡಲು ಆಗಮಿಸಿದ್ದ ಜನತೆ ಸಿಎಂ ಬರುವುದು ತಡವಾಗಿದ್ದರಿಂದ ಕಾದು ಕಾದು ಬೇಸತ್ತರು. ಕೆಲವರು ಸಿಎಂ ಬರುವ ಮೊದಲೇ ಸ್ಥಳದಿಂದ ವಾಪಸಾದರು.