ಪ್ರಾರಂಭವಾಗದ ಭತ್ತ ಖರೀದಿ…!

ಮಂಡ್ಯ: ರೈತರಿಂದ ಭತ್ತ ಖರೀದಿ ಮಾಡುತ್ತೇವೆಂದು ಘೋಷಿಸಿ ಹಲವು ದಿನಗಳೇ ಕಳೆಯುತ್ತಿದರೂ ಜಿಲ್ಲೆಯಲ್ಲಿ ಖರೀದಿ ಮಾತ್ರ ಆರಂಭಗೊಂಡಿಲ್ಲ.

2018-19ನೇ ಸಾಲಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಕನಿಷ್ಟ ಬೆಂಬಲ ಯೋಜನೆಯಡಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ಗೆ 1,750 ರೂ. ದರದಲ್ಲಿ ಸಾಮಾನ್ಯ ಭತ್ತ ಖರೀದಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಘೋಷಣೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ನೋಂದಣಿ ನಿರಂತರ: ಭತ್ತದ ಬೆಲೆ ಕುಸಿತಗೊಂಡಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಕಂಗಾಲಾಗಿದ್ದರು. ಇದನ್ನು ಸದುಪಯೋಗ ಪಡಿಸಿಕೊಂಡ ದಲ್ಲಾಳಿಗಳು, ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವೇ ರೈತರಿಂದ ಭತ್ತ ಖರೀದಿ ಮಾಡಬೇಕೆಂಬ ತೀವ್ರ ಒತ್ತಾಯ ಕೇಳಿ ಬಂದಿದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವುದಾಗಿ ಘೋಷಿ ಸಲಾಗಿತ್ತು. ಹಾಗಾಗಿ ರೈತರು ನಾಡ ಕಚೇರಿ, ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕೆಂದು ಸೂಚಿಸಲಾಗಿತ್ತು.

ಅದರಂತೆ ರೈತರು ಆಧಾರ್‌ಕಾರ್ಡ್, ಆರ್‌ಟಿಸಿ, ಬೆಳೆ ದೃಢೀಕರಣ ಪತ್ರ, ಬ್ಯಾಂಕ್‌ಪಾಸ್ ಪುಸ್ತಕದ ಪ್ರತಿ ಹಾಜರುಪಡಿಸಿ ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ. ಕೆಲವೊಂದು ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಾದರೂ, ರೈತರು ಕಾದು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಇನ್ನು ನೋಂದಣಿಗೆ ನಿಗದಿಯಾಗಿದ್ದ ದಿನ ಕಡಿಮೆಯಾದ ಹಿನ್ನೆಲೆ ಡಿಸೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದ್ದು, ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.

ಒಣಗುತ್ತಿದೆ ಭತ್ತ: ನಿಗದಿಪಡಿಸಿದ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಕೊಂಡಿರುವ ರೈತರಿಗೆ ಡಿ.16ರಿಂದಲೇ ಭತ್ತ ಸರಬರಾಜು ಮಾಡುವಂತೆ ಸೂಚಿಸಲಾಗಿತ್ತು. ಇದಕ್ಕೆಂದು ಅಕ್ಕಿಗಿರಣಿಗಳನ್ನು ನಿಗದಿಮಾಡುವುದಾಗಿಯೂ ಹೇಳಲಾಗಿತ್ತು. ಆದರೆ, ನೀಡಿದ ದಿನಾಂಕ ಮುಗಿದು ವಾರ ಕಳೆಯುತ್ತಿದ್ದರೂ, ಖರೀದಿ ಮಾತ್ರ ಪ್ರಾರಂಭವಾಗಿಲ್ಲ. ಇದು ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ.
ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ಪ್ರಾರಂಭದಲ್ಲಿಯೇ ಜಿಲ್ಲೆಯ ಕೆಲ ರೈತರು ಭತ್ತ ಕಟಾವು ಮಾಡಿದ್ದಾರೆ. ಅಂದಿನಿಂದ ನಿರಂತರವಾಗಿ ಕಟಾವು ಪ್ರಕ್ರಿಯೆ ನಡೆಯುತ್ತಿದೆ. ಜತೆಗೆ ಸರ್ಕಾರವೇ ಖರೀದಿ ಮಾಡುತ್ತದೆ ಎಂಬ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರೈತರು ಆತಂಕವಿಲ್ಲದೆ, ಕಟಾವು ಮಾಡಿ ಒಕ್ಕಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಹೇಳಿದ ದಿನಾಂಕ ಮುಗಿದರೂ, ಖರೀದಿ ಮಾತ್ರ ಪ್ರಾರಂಭವಾಗಿಲ್ಲ. ಇದು ತಡವಾಗುತ್ತಿರುವುದರಿಂದ ಕೆಲವರು ಭತ್ತವನ್ನು ಕಟಾವು ಮಾಡಿಲ್ಲ. ಈಗಾಗಲೇ ಮಾಡಿರುವವರು ವಿಧಿ ಇಲ್ಲದೇ ಕಾಯುತ್ತಾ ಕುಳಿತ್ತಿದ್ದಾರೆ.

ಅಕ್ಕಿಗಿರಣಿ ಸಮಸ್ಯೆ..? : ರಾಜ್ಯ ಸರ್ಕಾರ ಭತ್ತ ಖರೀದಿಯ ಜವಾಬ್ದಾರಿಯನ್ನು ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸಿದೆ. ಅದರಂತೆ, ರೈತರು ತರುವ ಭತ್ತವನ್ನು ಸಂಗ್ರಹಿಸಲು ಅಕ್ಕಿಗಿರಣಿಯನ್ನು ನಿಗದಿಪಡಿಸುವ ಹೊಣೆ ಉಗ್ರಾಣ ನಿಗಮ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಅಕ್ಕಿಗಿರಣಿ ಮಾಲೀಕರು ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ, ಜಿಲ್ಲೆಯ 257 ಅಕ್ಕಿಗಿರಣಿಗಳ ಪೈಕಿ ಈವರೆಗೆ ಬೆರಳೆಣಿಕೆಯಷ್ಟು ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭತ್ತ ಖರೀದಿಸಲು ಸಮಸ್ಯೆ ಎದುರಾಗಿದ್ದು, ಇದನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿಯೇ ತೀರ್ಮಾನ ನಡೆಯುತ್ತಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ರೈತರಿಂದ ಭತ್ತ ಖರೀದಿಗೆ ಸಂಬಂಧಿಸಿದಂತೆ ಕ್ರಮ ವಹಿಸಲಾಗಿದೆ. ಗುರುವಾರದೊಳಗೆ ಭತ್ತ ಖರೀದಿ ಪ್ರಾರಂಭಿಸಲಾಗುವುದು.
ಭಾಗವತ್, ಪ್ರಾದೇಶಿಕ ವ್ಯವಸ್ಥಾಪಕ
ರಾಜ್ಯ ಉಗ್ರಾಣ ನಿಗಮ

ಸರ್ಕಾರ ಹೇಳಿದ ದಿನಾಂಕ ಮುಗಿದರೂ, ರೈತರಿಂದ ಭತ್ತ ಖರೀದಿ ಮಾಡುತ್ತಿಲ್ಲ. ಇದರಿಂದಾಗಿ ಭತ್ತ ಒಣಗುತ್ತಿದೆ. ಈಗಾಗಲೇ ಬಹುತೇಕರು ದಲ್ಲಾಳಿಗಳು ಕೇಳಿದಷ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.
ಚನ್ನಸಂದ್ರ ಲಕ್ಷ್ಮಣ್, ರೈತರು