More

    ಉತ್ತಮ ಭವಿಷ್ಯಕ್ಕಾಗಿ ಮತ ಚಲಾಯಿಸಿ

    ಮಂಡ್ಯ: ಉತ್ತಮ ಭವಿಷ್ಯಕ್ಕಾಗಿ ಯಾವುದೇ ಜಾತಿ, ಧರ್ಮ, ಜನಾಂಗ ಮತ್ತು ಹಣದ ಆಮಿಷಕ್ಕೆ ಒಳಗಾಗದೆ ನಿರ್ಭಯ ಮತ್ತು ನಿರ್ಭೀತಿಯಿಂದ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಹಿರಿಯ ನ್ಯಾಯಾಧೀಶೆ, ಸಿ.ಜೆ.ಎಂ.ಸದಸ್ಯ ಕಾರ್ಯದರ್ಶಿ ಎನ್.ಡಿ.ಮಾಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ವತಿಯಿಂದ ಶನಿವಾರ ಆಯೋಜಿಸಿದ್ದ 2020ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಸ್ತುತ ಯುವಜನತೆಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಇಂತಹ ಆಚರಣೆಗಳಲ್ಲಿ ಯುವಜನತೆ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಮತದಾನದ ಪಾವಿತ್ರ್ಯತೆಯನ್ನು ಅರಿಯಲು ಸಾಧ್ಯ. ಮತದಾನದ ಘನತೆ ಮತ್ತು ಪಾವಿತ್ರ್ಯತೆ ಅರಿತುಕೊಂಡು, 18 ವರ್ಷ ತುಂಬಿದ ಎಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಸದೃಢ ದೇಶವನ್ನು ನಿರ್ಮಿಸಬೇಕು. ಮತದಾನ ಯಾವಾಗಲೂ ಗೌಪ್ಯವಾಗಿರಬೇಕು. ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವ ಮುನ್ನ ವಿವೇಚನೆಯಿಂದ ಆಲೋಚಿಸಿ ಉತ್ತಮರನ್ನು ಆಯ್ಕೆ ಮಾಡಿ ಎಂದರು.

    ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ನಮ್ಮ ಸಮಾಜದಲ್ಲಿರುವ ಶೋಷಣೆ, ದೌರ್ಜನ್ಯ, ಅನಾಚಾರಗಳನ್ನು ತೆಗೆದು ಹಾಕಬೇಕು ಮತ್ತು ಸಾಮಾನ್ಯನಿಗೂ ಸ್ವಾತಂತ್ರ್ಯ ನೀಡಬೇಕೆಂಬ ಉದ್ದೇಶದಿಂದ 12ನೇ ಶತಮಾನದ ಬಸವಣ್ಣನ ಅನುಭವ ಮಂಟಪದಿಂದ, 19ನೇ ಶತಮಾನದ ಸ್ವಾತಂತ್ರ್ಯ ಹೋರಾಟ, ಚಳವಳಿ ನಿರಂತರವಾಗಿ ನಡೆಯುತ್ತಿವೆ ಎಂದರು.
    ಸ್ವಾತಂತ್ರ್ಯದ ಬಳಿಕ ಮೂಲ ಹಕ್ಕನ್ನು ಪ್ರತಿಯೊಬ್ಬ ಪ್ರಜೆಗೂ ನೀಡಬೇಕೆಂದು ನಮ್ಮ ಸಂವಿಧಾನದಲ್ಲಿ ವಿಶೇಷವಾದ ಹಕ್ಕನ್ನು ಭಾರತದ ಎಲ್ಲ ಪ್ರಜೆಗಳಿಗೂ ನೀಡಿದೆ. ಸಂವಿಧಾನದಲ್ಲಿರುವ ಹಕ್ಕುಗಳ ಸಂರಕ್ಷಣೆ ಆಗಬೇಕಾದರೆ ಚುನಾವಣೆ ಮೂಲಕ ಉತ್ತಮರನ್ನು ಆರಿಸಿಕೊಳ್ಳಬೇಕು ಎಂದರು.
    ಉತ್ತಮ ಆಡಳಿತವನ್ನು ನೀಡಬೇಕೆಂಬ ದೃಷ್ಟಿಯಿಂದ ಚುನಾವಣೆಯನ್ನು ನಡೆಸಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಅದರಲ್ಲೂ 18 ವರ್ಷ ತುಂಬಿದ ಯುವಕ-ಯುವತಿಯರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.
    ಎಲ್ಲರೂ ಸದೃಢ ಮತ್ತು ಜಾಗೃತರಾದಾಗ ಮಾತ್ರ ಸದೃಢ ಭಾರತ ನಿರ್ಮಿಸಲು ಸಾಧ್ಯ. ಆದ್ದರಿಂದ ಗ್ರಾಪಂ, ಎಂಪಿ, ಎಂಎಲ್‌ಎ ಚುನಾವಣೆಯಲ್ಲಿ ಮುಕ್ತವಾಗಿ, ನಿರ್ಭೀತಿಯಾಗಿ ಮತ್ತು ನ್ಯಾಯಾ ಸಮ್ಮತವಾಗಿ ಪಾಲ್ಗೊಂಡು, ಪ್ರಜಾಪ್ರಭುತ್ವವನ್ನು ಗೆಲ್ಲಿಸುವಂತಹ ಗುರುತರ ಜವಾಬ್ದಾರಿ ನಮ್ಮದಾಗಿದೆ ಎಂದರು.
    ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಉಪವಿಭಾಗಾಧಿಕಾರಿ ಸೂರಜ್, ತಹಸೀಲ್ದಾರ್ ನಾಗೇಶ್, ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ನಗರಸಭೆ ಆಯುಕ್ತ ಲೋಕೇಶ್ ಉಪಸ್ಥಿತರಿದ್ದರು. ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು.
    ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತದಾನ ಕುರಿತಂತೆ ನಾಮಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts