ಶಿಕ್ಷಣ, ವೈದ್ಯ, ಕೃಷಿ ಕ್ಷೇತ್ರಗಳು ಸಮೃದ್ಧವಾಗಿರಲಿ

ನಾಗಮಂಗಲ: ಶಿಕ್ಷಕ, ವೈದ್ಯ ಮತ್ತು ಕೃಷಿಕ ಸಮೃದ್ದವಾಗಿದ್ದರೆ ದೇಶ ಚೆನ್ನಾಗಿರುತ್ತದೆ. ಈ ಮೂರು ಕ್ಷೇತ್ರಗಳು ಸಮೃದ್ಧವಾಗಿರುವಂತೆ ನೋಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ತಾಲೂಕಿನ ಆದಿಚುಂಚನಗಿರಿಯ ಬಿಜಿಎಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೈಸೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ದೇಹ ಮತ್ತು ಮನಸ್ಸು ಪ್ರಶಾಂತ ಮತ್ತು ಸದೃಢವಾಗಿರಲು ಕ್ರೀಡೆ ಅತ್ಯವಶ್ಯಕ. ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಹಳ್ಳಿಗಾಡಿನ ಮಕ್ಕಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಹೆಸರು ಮಾಡುತ್ತಿರುವುದು ಸಂತಸ ಸಂಗತಿ. ರಾಜ್ಯದ 412 ಪ್ರಥಮ ದರ್ಜೆ ಕಾಲೇಜಿಗೆ ಮೂಲ ಸೌಲಭ್ಯ ಒದಗಿಸಲು 600 ಕೋಟಿ ರೂ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ದೇಹ ಚಂದವಾಗಿರಲು ಕ್ರೀಡೆ ಮುಖ್ಯಪಾತ್ರ ವಹಿಸುತ್ತದೆ. ಇದರಲ್ಲಿ ಭಾಗವಹಿಸುವ ಸಂಖ್ಯೆ ಹೆಚ್ಚಬೇಕು. ದೇಹ ದೇವಮಂದಿರದಂತೆ. ಅದು ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ ಎಂದರು.

ಶಾಸಕ ಸುರೇಶ್‌ಗೌಡ, ಅಂತಾರಾಷ್ಟ್ರೀಯ ಓಟಗಾರ್ತಿ ಜಿ.ಕೆ.ವಿಜಯಕುಮಾರಿ ಧ್ವಜಾರೋಹಣ ನೆರವೇರಿಸಿದರು. ಮೈಸೂರು ವಿವಿ ಉಪಕುಲಪತಿ ಪ್ರೊ.ಟಿ.ಕೆ.ಉಮೇಶ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಇತರರಿದ್ದರು.