ಐದು ಪಶು ಚಿಕಿತ್ಸಾಲಯಗಳ ಮಂಜೂರಿಗೆ ಪ್ರಸ್ತಾವನೆ

ನಾಗಮಂಗಲ: ಕ್ಷೇತ್ರದ ಎಲ್ಲ ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಜತೆಗೆ ತಾಲೂಕಿಗೆ ಹೊಸದಾಗಿ ಐದು ಪಶು ಚಿಕಿತ್ಸಾಲಯಗಳನ್ನು ಮಂಜೂರು ಮಾಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.

ತಾಲೂಕಿನ ದೇವಲಾಪುರ ಹೋಬಳಿ ಕರಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಚಿಕ್ಕಯಗಟಿ ಮತ್ತು ಹರಳಕೆರೆ ಕೆರೆಗಳನ್ನು ತುಂಬಿಸುವ ಮೂಲಕ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗುವುದು. ಅಲ್ಲದೆ ಗ್ರಾಮ ಪರಿಮಿತಿಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗುಣಮಟ್ಟದ ಕಾಮಗಾರಿ ನಡೆಸುವಂತೆ ಪಿಡಿಒ ನಾಗೇಂದ್ರ ಅವರಿಗೆ ಸೂಚಿಸಿದರು. ಕರಡಹಳ್ಳಿಯಲ್ಲಿ ಎರಡು ತಿಂಗಳಿಂದ ಇಪ್ಪತ್ತಕ್ಕೂ ಹೆಚ್ಚು ಮಿಶ್ರತಳಿ ಹಸುಗಳು ಮೃತಪಟ್ಟಿರುವ ಹಿನ್ನೆಲೆ ಪಶು ವೈದ್ಯರನ್ನು ನಿಯೋಜಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ತಾಲೂಕಿನ ಕರಡಹಳ್ಳಿ, ಪಡುವಲಪಟ್ಟಣ, ಮಾಯಿಗೋನಹಳ್ಳಿ ಸೇರಿದಂತೆ ಐದು ಗ್ರಾಮಗಳಿಗೆ ಪಶು ಆಸ್ಪತ್ರೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಯವರೆಗೆ ಕರಡಹಳ್ಳಿ ಗ್ರಾಮಕ್ಕೆ ಪ್ರತಿ ಸೋಮವಾರ ಮತ್ತು ಶುಕ್ರವಾರ ಒಬ್ಬ ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸುವಂತೆ ಸ್ಥಳದಲ್ಲಿದ್ದ ಪಶು ಇಲಾಖೆಯ ಸಹಾಯಕ ನಿರ್ದೇಶಕ ಮಾದಪ್ಪ ಅವರಿಗೆ ಸೂಚನೆ ನೀಡಿದರು.

ನಂತರ ಹರಳಕೆರೆ, ಕಲ್ಲಿನಾಥಪುರ, ಚಿಕ್ಕಯಗಟಿ, ಲಿಂಗಮ್ಮನಹಳ್ಳಿ, ಹುಳ್ಳೇನಹಳ್ಳಿ, ದಂಡಿಗನಹಳ್ಳಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆ ಆಲಿಸಿದರು.

ತಹಸೀಲ್ದಾರ್ ಎಂ.ನಂಜುಂಡಯ್ಯ, ತಾಪಂ ಪ್ರಭಾರ ಇಒ ರವೀಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ, ಎಇಇ ಬೋರೇಗೌಡ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.