ಕಲ್ಲುಗಣಿಗಾರಿಕೆ ಯಂತ್ರ, ಟ್ರ್ಯಾಕ್ಟರ್ ಗ್ರಾಮಸ್ಥರ ವಶಕ್ಕೆ

ನಾಗಮಂಗಲ: ನಾಗಮಂಗಲ-ಚನ್ನರಾಯಪಟ್ಟಣ ತಾಲೂಕಿನ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಗ್ರಾಮಸ್ಥರು ದಾಳಿ ಮಾಡಿ ಒಂದು ಟ್ರಾೃಕ್ಟರ್ ಮತ್ತು ಒಂದು ಬಂಡೆ ಕೊರೆಯುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಹೊನ್ನಾವರ, ಎಚ್.ಕ್ಯಾತನಹಳ್ಳಿ, ಮಲ್ಲೇನಹಳ್ಳಿ, ಭೂವನಹಳ್ಳಿ, ಚನ್ನೇಗೌಡನಕೊಪ್ಪಲು, ಗಾಣಿಗರಕೊಪ್ಪಲು, ಸುಬ್ಬರಾಯನಕೊಪ್ಪಲು ಗ್ರಾಮದ ಜನರು ಬುಧವಾರ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಹೋಗಿ ವಾಹನ ಮತ್ತು ಯಂತ್ರಗಳನ್ನು ಹೊನ್ನಾವರ ಗ್ರಾಮಕ್ಕೆ ತೆಗದುಕೊಂಡು ಬಂದಿದ್ದಾರೆ. ಈ ವೇಳೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಹಲವು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಹಲವು ಗ್ರಾಮಗಳಲ್ಲಿ ಮನೆಗಳ ಗೋಡೆ ಬಿರುಕು ಬಿಟ್ಟಿವೆ. ಜತೆಗೆ ಬಂಡೆಗಳನ್ನು ಸ್ಪೋಟಿಸುವ ವೇಳೆ ಭಯಾನಕ ಶಬ್ಧ ಬರುತ್ತಿದ್ದರಿಂದ ತೊಂದರೆಯಾಗುತ್ತಿತ್ತು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ದೂರಿದರು.

ವಿಷಯ ತಿಳಿದು ಬಿಂಡಿಗನವಿಲೆ ಮತ್ತು ಶ್ರವಣಬೆಳಗೊಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ಮತ್ತು ಯಂತ್ರವನ್ನು ಸಂಬಂಧಪಟ್ಟವರಿಗೆ ವಾಪಸ್ ನೀಡಿ, ಇಲ್ಲದಿದ್ದರೆ ನಿಮ್ಮೆಲ್ಲರ ಮೇಲೆ ಕೇಸ್ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪೊಲೀಸರ ಗೂಂಡಾವರ್ತನೆಗೆ ಜಗ್ಗದ ವಿವಿಧ ಗ್ರಾಮಗಳ ಗ್ರಾಮಸ್ಥರು ನೀವು ನಮ್ಮ ಮೇಲೆ ಮೊಕದ್ದಮೆ ದಾಖಲಿಸಿದರೂ ಪರವಾಗಿಲ್ಲ. ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ಸ್ಥಳಕ್ಕೆ ಆಗಮಿಸುವವರೆಗೂ ವಾಹನ ಮತ್ತು ಯಂತ್ರವನ್ನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.