ಮೈಶುಗರ್ ಕಾರ್ಖಾನೆ ಸ್ಥಿತಿಯ ಶ್ವೇತಪತ್ರ ಹೊರಡಿಸಿ

ಮಂಡ್ಯ: ಮೈಶುಗರ್ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಈ ಬಗ್ಗೆ ಜ.9ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಒತ್ತಾಯಿಸಲಾಗುವುದು ಕಬ್ಬು ನಿಯಂತ್ರಣ ಮಂಡಳಿ ಸದಸ್ಯೆ, ರೈತ ಹೋರಾಟಗಾರ್ತಿ ಸುನಂದಾ ಜಯರಾಂ ತಿಳಿಸಿದರು.

ಜಿಲ್ಲೆಯ ಜೀವನಾಡಿ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದು ಸೇರಿ ಹಲವು ಗೊಂದಲ ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಶ್ವೇತಪತ್ರ ಹೊರಡಿಸಬೇಕು. ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆ ನಡೆಯಲೇಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರೈತರು, ಮಾಧ್ಯಮದವರು ಕಾರ್ಖಾನೆ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಬೇಕು. ಎಫ್‌ಆರ್‌ಪಿ ದರವನ್ನು ಕಡಿತಗೊಳಿಸದೆ ಸಕಾಲದಲ್ಲಿ ರೈತರಿಗೆ ನೀಡಬೇಕು. ಗುಣಮಟ್ಟದ ಸಕ್ಕರೆ ಉತ್ಪಾದನೆಗೆ ಆದ್ಯತೆ ಕೊಡಬೇಕು. ಅಂತೆಯೇ, ಪ್ರಮುಖವಾಗಿ ಈಗ ಕಾರ್ಖಾನೆಯಲ್ಲಿ ಕಬ್ಬು ಅರೆಯವಿಕೆ ಸ್ಥಗಿತಗೊಳಿಸಲಾಗಿದ್ದು, ಬಾಕಿ ಉಳಿದಿರುವ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ತಕ್ಷಣ ಕ್ರಮ ವಹಿಸಬೇಕು. ಇನ್ನು ಮುಂದಿನ ವರ್ಷ ಕಬ್ಬು ಅರೆಯುವಿಕೆ ಸಂಬಂಧ ಸರಿಯಾಗಿ ಕ್ರಮ ವಹಿಸಬೇಕೆಂದು ಅಂದು ನಡೆಯುವ ಸಭೆಯಲ್ಲಿ ಸಚಿವರು, ಅಧಿಕಾರಿಗಳನ್ನು ಒತ್ತಾಯಿಸಲಾಗುವುದು ಎಂದರು.

ಇನ್ನು ಹೊಸ ವರ್ಷದಲ್ಲಿ ರೈತರಿಗೆ ಬರೆ ಎಳೆಯುವ ಕೆಲಸವನ್ನು ಮನ್‌ಮುಲ್ ಮಾಡಿದೆ. ಇದು ಸರಿಯಾದ ಕ್ರಮವಲ್ಲ. ಕಳೆದ ಬಾರಿ ಎರಡು ರೂಪಾಯಿ ಕಡಿತ ಮಾಡಿದ್ದ ವೇಳೆ ಪ್ರತಿಭಟಿಸಿದ ನಂತರ ಒಂದು ರೂ. ಕಡಿತದ ಆದೇಶ ಹಿಂಪಡೆಯಲಾಗಿತ್ತು. ಈ ಬಾರಿಯೂ ಅದೇ ಯೋಜನೆ ಇರಬಹುದು. ಆದ್ದರಿಂದ, ಕಡಿತ ಮಾಡಿ ಹೊರಡಿಸಿರುವ ಆದೇಶ ಹಿಂಪಡೆಯಲೇಬೇಕು. ಇದರ ಬದಲು ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಬಗ್ಗೆ ಚಿಂತಿಸಬೇಕೆಂದು ಸಲಹೆ ನೀಡಿದರು.

ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಕೃಷ್ಣ, ರೈತ ಮುಖಂಡ ಕೃಷ್ಣಪ್ರಕಾಶ್ ಇದ್ದರು.