
ಮಂಡ್ಯ: ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ತಡೆ, ಮೈಶುಗರ್ ಕಾರ್ಖಾನೆ ಆರಂಭ, ನಾಲೆಗಳಿಗೆ ನೀರು ಹರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಬಳಿ ಧರಣಿ ಕುಳಿತ ಪ್ರತಿಭಟನಾಕಾರರು, ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿ.ಮಲ್ಲಿಗೆರೆ ಗ್ರಾ.ಪಂ.ನ ಆನುಕುಪ್ಪೆ ಗ್ರಾಮದ ಗೋಮಾಳದ ಆಜುಭಾಜಿನಲ್ಲಿ ಹಲವು ರೈತರಿಗೆ ದರಖಾಸ್ತು ಮಂಜೂರಾಗಿ, ದುರಸ್ತಾಗಿರುತ್ತದೆ. ಈ ಭೂಮಿಯಲ್ಲಿ ಅಕ್ರಮವಾಗಿ ಮೆಗ್ಗರ್ ಬ್ಲಾಸ್ಟ್ ಬಳಸಿ ಕಲ್ಲು ಘಟಕ ನಡೆಸಲಾಗುತ್ತಿದೆ.
ಸಮೀಪದಲ್ಲೇ ಕೆರೆ, ಅಕ್ವಿಡಕ್ಟ್‌ಗಳು ಇದ್ದು, ಎಲ್ಲದಕ್ಕೂ ಅಪಾಯ ಹೆಚ್ಚಾಗಿದೆ. ಜತೆಗೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿ ಸ್ಥಗಿತವಾಗುವ ಸಾಧ್ಯತೆಯಿದೆ. ಸುಮಾರು 500 ಮೀಟರ್ ಅಂತರದಲ್ಲಿ ವಾಸದ ಮನೆಗಳು ಇದ್ದು, ಬಿರುಕು ಬಿಡುತ್ತಿದ್ದು, ಜೀವ ಭಯದಿಂದ ಬದುಕುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಹಾನಿಯಾಗಿರುವ ಮನೆಗಳಿಗೆ ಸಂಬಂಧಪಟ್ಟವರಿಂದ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.
ಅಂತೆಯೇ, ಮೈಶುಗರ್ ಕಾರ್ಖಾನೆಯನ್ನು ಆರಂಭಿಸಬೇಕು. ಕೆ.ಆರ್.ಎಸ್. ಅಚ್ಚುಕಟ್ಟು ನಾಲೆಗಳಲ್ಲಿ ಮುಂದಿನ ಬೆಳೆಗಳಿಗೆ ನೀರು ಹರಿಸಬೇಕು. ತಕ್ಷಣ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಬ್ಯಾಂಕ್‌ಗಳಲ್ಲಿ ಹಾಗೂ ಸಹಕಾರ ಸಂಘಗಳಲ್ಲಿ ಸಕಾಲದಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡಬೇಕು. ಎನ್‌ಎಸ್‌ಎಲ್ ಹಾಗೂ ಐಸಿಎಲ್ ಕಾರ್ಖಾನೆಗಳಿಂದ ಬಾಕಿ ಉಳಿದಿರುವ ಹಣವನ್ನು ತಕ್ಷಣ ಪಾವತಿ ಮಾಡಿಸಬೇಕೆಂದು ಆಗ್ರಹಿಸಿ ಶಿರಸ್ತೇದಾರ್ ಪುಷ್ಪಲತಾ ಅವರಿಗೆ ಮನವಿ ಸಲ್ಲಿಸಿದರು.