ಹಾಲಿನ ದರ ಕಡಿತ ವಾಪಸ್‌ಗೆ ಆಗ್ರಹ

ಮಂಡ್ಯ: ಜ.1ರಿಂದ ಲೀಟರ್ ಹಾಲಿಗೆ 2 ರೂ. ಕಡಿತ ಮಾಡಿರುವುದನ್ನು ವಾಪಸ್ ಪಡೆಯಬೇಕೆಂದು ಬಿಜೆಪಿ ಮುಖಂಡರು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಗೆಜ್ಜಲಗೆರೆಗೆ ಕೆ.ಎಸ್. ನಂಜುಂಡೇಗೌಡ, ಡಾ.ಸಿದ್ದರಾಮಯ್ಯ, ಕೆ.ನಾಗಣ್ಣಗೌಡ ನೇತೃತ್ವದಲ್ಲಿ ತೆರಳಿದ ಬಿಜೆಪಿ ಮುಖಂಡರು, ಒಕ್ಕೂಟ ಆರ್ಥಿಕ ತೊಂದರೆಯಲ್ಲಿದೆ ಎಂಬ ಕಾರಣ ಹೇಳಿ ಹಾಲಿನ ದರ ಕಡಿಮೆ ಮಾಡಿರುವುದು ಸರಿಯಲ್ಲ. ವಾರದೊಳಗೆ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹಾಲು ಉತ್ಪಾದಕರಿಂದ ಅವರ ಅಭಿವೃದ್ಧಿಗಾಗಿ ಶ್ರಮಿಸುವ ಉದ್ದೇಶದಿಂದ ಆಯ್ಕೆಯಾದ ಪ್ರತಿನಿಧಿಗಳು ಹಾಲು ಉತ್ಪಾದಕರಾದ ರೈತರು, ಕೃಷಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದೀರಿ. 2014ರ ಫೆ.26ರಂದು ನಡೆದ ಒಕ್ಕೂಟದ 310ನೇ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ ಕೆಜಿ ಹಾಲಿಗೆ 25-45 ರೂ. ನಿಗದಿಪಡಿಸಲಾಗಿತ್ತು.

ಅಂದು ಪಶು ಆಹಾರ ಒಂದು ಚೀಲಕ್ಕೆ 644 ರೂ. ಇತ್ತು. ಇಂದು ಪಶು ಆಹಾರ ಚೀಲಕ್ಕೆ 965 ರೂ. ಆಗಿದೆ. ಇದು ಆಡಳಿತ ಮಂಡಳಿ ಗಮನಕ್ಕೆ ಬಂದಿಲ್ಲವೆ. ಆಡಳಿತ ವ್ಯವಸ್ಥೆಯ ಲೋಪ ಇರುವುದರಿಂದ ಒಕ್ಕೂಟಕ್ಕೆ ಆರ್ಥಿಕ ನಷ್ಟವಾಗಿದೆ ವಿನಃ ಹಾಲು ಉತ್ಪಾದಕರಿಂದಲ್ಲ.

ಪ್ರಕೃತಿದತ್ತವಾಗಿ ಸಿಗುವ 1 ಲೀ. ನೀರಿಗೆ 20 ರೂ. ಇರುವಾಗ ಶ್ರಮ, ಬೆವರು ಸುರಿಸಿ, ಉತ್ಪಾದಿಸಿದ ಹಾಲಿಗೆ ಕೇವಲ 20 ರೂ. ನಿಗದಿ ಮಾಡಿರುವುದು ಹಾಲು ಉತ್ಪಾದಕರಿಗೆ ಹೊಸ ವರ್ಷದ ಕೊಡುಗೆಯೆ ಎಂದು ಪ್ರಶ್ನಿಸಿದರು.

ಹಾಲು ಉತ್ಪಾದಕರ ಭವಿಷ್ಯ ರೂಪಿಸಲು ಆಯ್ಕೆಯಾಗಿರುವ ತಾವು ತಕ್ಷಣ ದರ ಕಡಿತ ಮಾಡಿರುವ ನಿರ್ಧಾರ ವಾಪಸ್ ತೆಗೆದುಕೊಳ್ಳಬೇಕು. ಒಂದು ವಾರದಲ್ಲಿ ದರ ವಾಪಸ್ ಪಡೆಯದಿದ್ದಲ್ಲಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ಈ ಸಂಬಂಧ ಆಡಳಿತ ಮಂಡಳಿ ಗಮನಕ್ಕೆ ತಂದು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದರು.

ಮಲ್ಲಿಕಾರ್ಜುನ್, ರಘು, ಜವರೇಗೌಡ, ಎಂ.ಸಿ. ವರದರಾಜು, ಸುರೇಶ್, ಎಸ್. ಶಿವಕುಮಾರ್ ಆರಾಧ್ಯ, ಮದ್ದೂರು ಸತೀಶ್, ಹುಲಿವಾನ ಶಿವಣ್ಣ, ಸಿ.ಟಿ. ಮಂಜುನಾಥ್ ಮೊದಲಾವರಿದ್ದರು.