ಬೆಳೆ ಸಾಲ ವಸೂಲಾತಿಗೆ ಕೋರ್ಟ್ ನೋಟಿಸ್

ಮೇಲುಕೋಟೆ (ಮಂಡ್ಯ): ಬೆಳೆ ಸಾಲ ಪಡೆದಿದ್ದ ರೈತನಿಂದ ಸಾಲ ವಸೂಲಿ ಮಾಡಲು ಎಸ್‌ಬಿಐನ ಬೆಳ್ಳಾಳೆ ಶಾಖೆ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ನೋಟಿಸ್ ಕಂಡ ರೈತ ಕುಟುಂಬ ಆತಂಕಕ್ಕೊಳಗಾಗಿದೆ.

ಪಾಂಡವಪುರ ತಾಲೂಕಿನ ಮೇನಾಗರ ಗ್ರಾಮದ ಲೇಟ್ ಮರೀಗೌಡರ ಪುತ್ರ ಎಂ.ಜವರೇಗೌಡರಿಗೆ ಪಾಂಡವಪುರದ ಜೆಎಂಎಫ್‌ಸಿ ನ್ಯಾಯಾಲಯದಿಂದ ಸೆ.29ರಂದು ನೋಟಿಸ್ ಜಾರಿಯಾಗಿದ್ದು, ಅ.5ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

ಜವರೇಗೌಡ ಹಾಗೂ ಅವರ ಪುತ್ರ ಎಂ.ಜೆ.ಆನಂದ್ 2009ರಲ್ಲಿ 70 ಸಾವಿರ, 60 ಸಾವಿರ ಒಟ್ಟು 1.30 ಲಕ್ಷ ರೂ. ಸಾಲಪಡೆದಿದ್ದರು. ಆದರೆ, ಈ ತನಕ ಸಾಲ ವಾಪಸ್ ಮಾಡಿಲ್ಲ. ಹಾಗಾಗಿ ಬ್ಯಾಂಕ್ ನ್ಯಾಯಾಲಯದ ಮೂಲಕ ನೋಟಿಸ್ ಜಾರಿ ಮಾಡಿಸಿದೆ.

ನೋಟಿಸ್ ಪಡೆದ ಜವರೇಗೌಡ ಆತಂಕಕ್ಕೊಳಗಾಗಿದ್ದು, ಸರ್ಕಾರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಲೇ ಇದೆ. ಆದರೆ, ಮನ್ನಾ ಆಗಿಲ್ಲ. ಬರದಿಂದ ಸರಿಯಾಗಿ ಬೆಳೆ ಸಿಕ್ಕಿಲ್ಲ. ತಂದೆ, ತಾಯಿ, ಅಳಿಯ ಮೃತಪಟ್ಟರು. ನನಗೂ ಆರೋಗ್ಯ ಸರಿಯಿಲ್ಲ. ಇಂತಿರುವಾಗ ಕೋರ್ಟ್ ನೋಟಿಸ್ ಬಂದಿದೆ. ನಾವೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನಾನು ಹೇಗೆ ಸಾಲ ತೀರಿಸಬೇಕೆಂದು ತಿಳಿಯುತ್ತಿಲ್ಲ. ಉಳಿದಿರುವ ದಾರಿ ಆತ್ಮಹತ್ಯೆ. ಸರ್ಕಾರ ತಕ್ಷಣ ಸಾಲ ಮನ್ನಾ ಮಾಡಿ, ನಮ್ಮನ್ನು ಋಣಮುಕ್ತರನ್ನಾಗಿ ಮಾಡಲಿ ಎಂದವರು ಒತ್ತಾಯಿಸಿದ್ದಾರೆ.