ಮಹಿಳೆ ಬ್ಯಾಗ್‌ನಿಂದ 1ಲಕ್ಷ ರೂ, 500 ಅಮೆರಿಕನ್ ಡಾಲರ್ ಕಳವು

ಭಕ್ತರ ಸೋಗಿನಲ್ಲಿ ಬಂದ ಕಳ್ಳರ ತಂಡದಿಂದ ಕೃತ್ಯ
ಮೇಲುಕೋಟೆ ದೇವಸ್ಥಾನದಲ್ಲಿ ಖದೀಮರ ಕೈ ಚಳಕ
ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ

ಮೇಲುಕೋಟೆ: ವಿಶ್ವ ಪ್ರಸಿದ್ಧ ಶ್ರೀ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲಿ ಭಕ್ತರ ಸೋಗಿನಲ್ಲಿ ಬಂದ ಕಳ್ಳರ ತಂಡ, ದೇವರ ದರ್ಶನ ಮಾಡುತ್ತಿದ್ದ ಮಹಿಳೆ ವ್ಯಾನಿಟಿ ಬ್ಯಾಗ್‌ನಿಂದ ಹಣ ಕಳ್ಳತನ ಮಾಡಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಂಗಳೂರು ಮೂಲದ ಮಾಲಿನಿ ಹಣ ಕಳೆದುಕೊಂಡವರು.
ಚೆಲುವ ನಾರಾಯಣ ಸ್ವಾಮಿ ದೇವರ ದರ್ಶನಕ್ಕೆ ಕುಟುಂಬ ಸಮೇತ ಭಾನುವಾರ ಆಗಮಿಸಿದ್ದರು. ಬೆಳಗ್ಗೆ 11 ಗಂಟೆಯಲ್ಲಿ ದೇವಾಲಯದಲ್ಲಿ ದೇವರ ದರ್ಶನ ಮಾಡುವಾಗ ಭಕ್ತರ ಸೋಗಿನಲ್ಲಿದ್ದ 6 ಮಹಿಳೆಯರು ಹಾಗೂ ವ್ಯಕ್ತಿಯೊಬ್ಬ ಮಾಲಿನಿ ಅವರ ಬ್ಯಾಗ್‌ನಲ್ಲಿದ್ದ 1 ಲಕ್ಷ ರೂ. ಹಾಗೂ 500 ಅಮೆರಿಕನ್ ಡಾಲರ್ ಕಳವು ಮಾಡಿದ್ದಾರೆ.
ಗೊತ್ತಾಗಿದ್ದು ಹೇಗೆ?: ಹಣ್ಣು, ಕಾಯಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದ ಕಳ್ಳರು, ಮಾಲಿನಿ ಅವರನ್ನು ಹಿಂಬಾಲಿಸಿದ್ದಾರೆ. ದೇಗುಲದ ಒಳಗೆ ಸಿಸಿ ಟಿವಿ ಕ್ಯಾಮರಾಕ್ಕೆ ಅಡ್ಡಲಾಗಿ ನಿಂತ ವ್ಯಕ್ತಿ, ದೃಶ್ಯ ಸೆರೆಯಾಗುವುದನ್ನು ತಡೆಯಲು ಪ್ರಯತ್ನಿಸಿದ್ದಾನೆ.
ವ್ಯಾನಿಟಿ ಬ್ಯಾಗ್‌ನಿಂದ ಪರ್ಸ್ ತೆಗೆದು ಮಂಗಳಾರತಿಗೆ ಹಣ ಹಾಕುವಾಗ ಬ್ಯಾಗ್‌ನಲ್ಲಿದ್ದ ಮತ್ತೊಂದು ಪರ್ಸ್‌ಅನ್ನು ಕಳವು ಮಾಡಿದ್ದಾರೆ. ಕಳ್ಳತನ ಮಾಡುವಾಗ ಇವರ ಗುಂಪಿನ ಉಳಿದ ಸದಸ್ಯರು ಮಾಲಿನಿ ಅವರ ಸುತ್ತ ನಿಂತು ಕಳ್ಳತನ ಮಾಡುವುದು ಯಾರಿಗೂ ತಿಳಿಯದ ಹಾಗೆ ನೋಡಿಕೊಂಡಿದ್ದಾರೆ.ಮಾಲಿನಿಯವರು ತಕ್ಷಣ ಬ್ಯಾಗ್ ನೋಡಿದಾಗ ಕಳ್ಳತನ ಆಗಿರುವುದನ್ನು ತಿಳಿದು ಗಂಡನಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರ ಗಮನಕ್ಕೆ ತರಲಾಯಿತು. ಬಳಿಕ ಪೊಲೀಸರು, ಸಿಸಿ ಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೃತ್ಯ ಗೊತ್ತಾಗಿದೆ.
ಪರ್ಸ್‌ನಲ್ಲಿದ್ದ ಹಣ ಮತ್ತು ಡಾಲರ್ ತೆಗೆದು ಕೊಂಡು ಖಾಲಿ ಪರ್ಸ್ ಮತ್ತು ಎಟಿಎಂ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಹೊರಭಾಗದ ಹೊಸಹಳ್ಳಿ ಶನಿದೇವರ ಗುಡಿಯಲ್ಲಿ ಹಾಕಿ ಹೋಗಿದ್ದಾರೆ.
ಅನುಮಾನದ ಮೇಲೆ ಮೂವರು ಮಹಿಳೆಯರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.