ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ

ರಾಜಬೀದಿಗಳಲ್ಲಿ ಉತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

ವಿಜಯವಾಣಿ ಸುದ್ದಿಜಾಲ ಮೇಲುಕೋಟೆ
ವಿಶ್ವ ಪ್ರಸಿದ್ಧ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ದೇವಾಲಯದ ರಾಜಬೀದಿಯಲ್ಲಿ ಬುಧವಾರ ಸಾವಿರಾರು ಭಕ್ತರ ಸಮೂಹದಲ್ಲಿ ನೆರವೇರಿತು.
ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಸಂಪ್ರದಾಯದಂತೆ ಚೆಲುವ ನಾರಾಯಣ ಸ್ವಾಮಿ ಹಾಗೂ ರಾಮಾನುಜರಿಗೆ ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿತು. ಉತ್ತರ ಫಲ್ಗುಣೀ ನಕ್ಷತ್ರದಲ್ಲಿ ಹಮ್ಮಿಕೊಂಡಿದ್ದ ಚೆಲುವ ನಾರಾಯಣ ಸ್ವಾಮಿ ಮಹಾ ರಥೋತ್ಸವಕ್ಕೆ ಉಪವಿಭಾಗಾಧಿಕಾರಿ ಶೈಲಜಾ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಾದಸ್ವರ ಹಾಗೂ ವೇದಘೋಷದೊಂದಿಗೆ ಮಹಾ ರಥೋತ್ಸವ ದೇವಾಲಯದ ರಾಜಬೀದಿಯಲ್ಲಿ ವಿಜೃಭಣೆಯಿಂದ ಜರುಗಿತು.
ಬೆಳಗ್ಗೆ 10 ಗಂಟೆ ಆರಂಭವಾದ ರಥೋತ್ಸವ ಮಧ್ಯಾಹ್ನ 12:30 ಕ್ಕೆ ಮುಗಿಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಇನ್ನೂ ಕೆಲವರು ಭಕ್ತಿಭಾವದಿಂದ ಹಣ್ಣುದವನ ಎಸೆದು ಇಷ್ಟಾರ್ಥ ಸಿದ್ಧಿಗೆ ಬೇಡಿದರು.
ಪಂಚಕಲ್ಯಾಣಿಯಲ್ಲಿ ಪೂಜೆ: ಭಕ್ತರು ಮೊದಲು ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಾಡಿ ಶ್ರದ್ಧಾಭಕ್ತಿಯಿಂದ ಮೇಲುಕೋಟೆಯ ನಾಮಧರಿಸಿ, ಕಲ್ಯಾಣಮ್ಮನಿಗೆ ಹೂ ಹಣ್ಣು ಕಾಯಿಗಳಿಂದ ಮಂಗಳಾರತಿ ಹಾಗೂ ಪೂಜಾ ಕೈಂಕರ್ಯ ನೆರವೇರಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ಚೆಲುವ ನಾರಾಯಣ ಸ್ವಾಮಿ ಮಹಾ ರಥೋತ್ಸವ ಆರಂಭವಾಗುತ್ತಿದಂತೆ ಸಾವಿರಾರು ಭಕ್ತರ ಗೋವಿಂದ ಗೋವಿಂದ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ಸಂಜೆ ಮೈಸೂರಿನ ಅಶೋಕಪುರಂನ ಶ್ರೀ ಮಹಾಕಾಳಿಕಾಂಬ ಟ್ರಸ್ಟ್‌ನಿಂದ ಸ್ವಾಮಿಯ ಬಂಗಾರದ ಪಲ್ಲಕ್ಕಿ ಉತ್ಸವ ನಡೆಯಿತು.

ಇಂದು ತೆಪ್ಪೋತ್ಸವ: ಮಾ.21ರಂದು ರಾತ್ರಿ ಪಂಚಕಲ್ಯಾಣಿಯಲ್ಲಿ ಚೆಲುವ ನಾರಾಯಣ ಸ್ವಾಮಿ ಹಾಗೂ ಶ್ರೀದೇವಿ ಭೂದೇವಿ ಅಮ್ಮನವರ ಮತ್ತು ರಾಮಾನುಜರ ತೆಪ್ಪೋತ್ಸವ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.