ನಮ್ಮ ಯೋಧರನ್ನು ಸಾಯಿಸಿದಂತೆ ಉಗ್ರರನ್ನು ಸದೆಬಡಿಯಬೇಕು: ಮಂಡ್ಯ ಹುತಾತ್ಮ ಯೋಧನ ಪತ್ನಿಯ ಆಕ್ರೋಶ

ಮಂಡ್ಯ: ನಮ್ಮ ಯೋಧರನ್ನು ಸಾಯಿಸಿದಂತೆ ಉಗ್ರರನ್ನು ನಾವು ಸದೆಬಡಿಯಬೇಕು ಎಂದು ಮಂಡ್ಯದ ಹುತಾತ್ಮ ಯೋಧನ ಪತ್ನಿ ಕಣ್ಣೀರಿಡುತ್ತಲೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದಲ್ಲಿರುವ ಹುತಾತ್ಮ ಯೋಧ ಗುರು ಅವರ ಗುಡಿಗೆರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ವರ್ಷದ ಹಿಂದಷ್ಟೇ ಹೊಸ ಮನೆಯ ಗೃಹಪ್ರವೇಶ ನೆರವೇರಿಸಿ ಹುತಾತ್ಮ ಯೋಧ ಮದುವೆ ಮಾಡಿಕೊಂಡಿದ್ದ. ಪತಿಯನ್ನು ಕಳೆದುಕೊಂಡು ಕಣ್ಣೀರ ಸಾಗರದಲ್ಲಿ ಮುಳುಗಿರುವ ಪತ್ನಿ ಕಲಾವತಿ ಯೋಧರ ಮೇಲೆ ದಾಳಿ ಮಾಡಿದ ಉಗ್ರರಿಗೆ ಕಣ್ಣೀರಿಡುತ್ತಲೇ ಹಿಡಿಶಾಪ ಹಾಕಿದ್ದಾರೆ.

ಬುಧವಾರ ಸಂಜೆ ಕೊನೆಯ ಬಾರಿ ನನಗೆ ಕರೆ ಮಾತಾಡಿದ್ದರು. ನಿನ್ನೆ ಸಂಜೆ ನನಗೆ ಕರೆ ಮಾಡಿದಾಗ ನಾನು ಕರೆ ಸ್ವೀಕರಿಸಿರಲಿಲ್ಲ. ಮತ್ತೆ ನನ್ನ ಪತಿಗೆ ಕರೆ ಮಾಡೋಣ ಅಂದುಕೊಂಡಿದ್ದೆ. ಆದರೆ, ಅಷ್ಟರಲ್ಲಿ ಎಲ್ಲಾ ಮುಗಿದು ಹೋಗಿತ್ತು. ಹೀಗಾಗುತ್ತೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಹೇಳುತ್ತಲೇ ಮಾಧ್ಯಮದ ಮುಂದೆ ಕಲಾವತಿ ಕಣ್ಣೀರಿಟ್ಟರು.

ಅಸ್ವಸ್ಥಗೊಂಡ ಯೋಧನ ತಂದೆ
ಮಗನ ಸಾವಿನ ದುಃಖವನ್ನು ಜೀರ್ಣಿಸಿಕೊಳ್ಳಲಾಗದೇ ತಂದೆ ಹೊನ್ನಯ್ಯ ಅವರು ಸ್ಥಳದಲ್ಲೇ ತೀವ್ರ ಅಸ್ವಸ್ಥಗೊಂಡಿದ್ದು, ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಅಂತ್ಯಕ್ರಿಯೆಗೆ ಜಾಗಕ್ಕೆ ಸಿದ್ಧತೆ
ನಮಗೆ ಕೇಂದ್ರ ಗೃಹ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಸರ್ಕಾರದ ಸೂಚನೆ ಮೇರೆಗೆ ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರ ಯಾವಾಗ ಬರುತ್ತದೆ ಎಂಬುದು ಸಂಜೆ ವೇಳೆಗೆ ತಿಳಿಯಬಹುದು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ಅಂತ್ಯಕ್ರಿಯೆ ಮಾಡಲು ಜಮೀನು ಇಲ್ಲದ ಕಾರಣ ಜಿಲ್ಲಾಡಳಿತದಿಂದಲೇ ವೀರ ಯೋಧನ ಸಮಾಧಿಗೆ ಒಂದು ಎಕರೆ ಜಾಗ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಸ್ಪಷ್ಟನೆ ನೀಡಿದ್ದಾರೆ.

ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಜೆಡಿಎಸ್ ಸಂಸದ ಎಲ್.ಆರ್.ಶಿವರಾಮೇಗೌಡ ಹುತಾತ್ಮ ಯೋಧನ ನಿವಾಸಕ್ಕೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ಬರುವ ಸಾಧ್ಯತೆ ಇದೆ.

ಮಂಡ್ಯ ಜಿಲ್ಲೆಯದ್ಯಾಂತ ಶೋಕಾಚರಣೆ
ಹುತಾತ್ಮ ಯೋಧನ ಸಾವಿಗೆ ತವರು ಜಿಲ್ಲೆ ಕಂಬಿನಿ ಮಿಡಿದಿದ್ದು, ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಹುತಾತ್ಮ ಯೋಧನ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ನಮ್ಮ ಯೋಧರನ್ನು ಸಾಯಿಸಿದಂತೆ ಉಗ್ರರನ್ನು ಸದೆಬಡಿಯಬೇಕು: ಮಂಡ್ಯ ಹುತಾತ್ಮ ಯೋಧನ ಪತ್ನಿಯ ಆಕ್ರೋಶ”

  1. A very painful . Sitting on my chair in office I cried. Without my knoweldge, without my sense I cried. I am a soldier I saw soldier dying in war but not his wife crying like this. I am in and with tears not for his death but for her courage to say she is proud wife of greate soldier.

    Born to die
    Muthappa PM

Comments are closed.