ಹುತಾತ್ಮ ಗುರು ಕುಟುಂಬದಲ್ಲಿ ಕೋಟಿ ಕಿತ್ತಾಟ

ಮಂಡ್ಯ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಗುಡಿಗೆರೆ ಕಾಲನಿಯ ಯೋಧ ಎಚ್.ಗುರು ಅವರ ಕುಟುಂಬಕ್ಕೆ ಅಪಾರ ಪ್ರಮಾಣದ ನೆರವು ಹರಿದುಬಂದಿದ್ದು, ಇನ್ನೂ ಹಲವರು ನೆರವು ನೀಡುತ್ತಿದ್ದಾರೆ. ಮೂಲಗಳ ಪ್ರಕಾರ ವಾಹನ ಹೊರತುಪಡಿಸಿ 12 ಕೋಟಿ ರೂ.ಗೂ ಹೆಚ್ಚು ಹಣ ಸಿಕ್ಕಿದೆ. ಆದರೆ, ಇದರಿಂದಾಗಿಯೇ ಕುಟುಂಬದ ನೆಮ್ಮದಿ ಹಾಳಾಗಿದೆ ಎಂಬ ಮಾತುಗಳು ಗುಡಿಗೆರೆ ಸುತ್ತಮುತ್ತ ಕೇಳಿಬರುತ್ತಿವೆ.

ಗುರು ಪತ್ನಿ ಕಲಾವತಿ ಅವರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಮಾಧ್ಯಮಗಳು ಪ್ರಚುರಪಡಿಸಿ ದ್ದವು. ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು. ರಾಜ್ಯ ಸರ್ಕಾರ 25 ಲಕ್ಷ ರೂ., ಅಂಬಾನಿ ಸಂಸ್ಥೆ 25 ಲಕ್ಷ ರೂ. ಇನ್ಪೋಸಿಸ್ ಫೌಂಡೇಷನ್ 10 ಲಕ್ಷ ರೂ., ನ್ಯಾಷನಲ್ ಟ್ರಾವೆಲ್ಸ್ 10 ಲಕ್ಷ ರೂ., ಆಳ್ವಾಸ್ ಶಿಕ್ಷಣ ಸಂಸ್ಥೆ 10 ಲಕ್ಷ ರೂ. ಹಾಗೂ ವಿದೇಶಿ ಉದ್ಯಮಿಯೊಬ್ಬರು 1 ಕೋಟಿ ರೂ. ಹೀಗೆ ಹಲವು ಸಂಘ-ಸಂಸ್ಥೆಗಳು ನೆರವು ನೀಡಿವೆ. ಸುಮಲತಾ ಅಂಬರೀಷ್ 20 ಗುಂಟೆ ಜಮೀನು ನೀಡುವುದಾಗಿ ಘೊಷಿಸಿದ್ದಾರೆ. ಜತೆಗೆ, ಸಹಸ್ರಾರು ಮಂದಿ ಖಾತೆಗೆ ಹಣ ಹಾಕಿದ್ದಾರಲ್ಲದೆ, ಉದ್ಯಮಿಗಳು, ಹಲವು ಸಂಘ-ಸಂಸ್ಥೆಗಳು, ಜನತೆ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ನೆರವು ನೀಡಿದ್ದಾರೆ. ವಿವಿಧ ಕಡೆಗಳಿಂದ ಇನ್ನೂ ಹಣ ಹರಿದು ಬರುತ್ತಿದೆ.

ಕುಟುಂಬದಲ್ಲಿ ಅಶಾಂತಿ: ಹಣದ ವಿಚಾರವಾಗಿ ಕುಟುಂಬದಲ್ಲಿ ಶೀತಲ ಸಮರ ಶುರುವಾಗಿದ್ದು, ಸೊಸೆಯನ್ನು ಗುರು ತಾಯಿ ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಲಾವತಿ ಪೊಲೀಸ್ ಠಾಣೆಗೂ ತೆರಳಿದ್ದು ‘ತಿಥಿ ಕಾರ್ಯ ಮುಗಿಸಿ ಬನ್ನಿ, ನಂತರ ಇತ್ಯರ್ಥ ಮಾಡೋಣ. ಇಲ್ಲದಿದ್ದರೆ ಕುಟುಂಬದ ಗೌರವ ಹಾಳಾಗುತ್ತದೆ’ ಎಂದು ಪೊಲೀಸರು ಸಮಾಧಾನಪಡಿಸಿ ಕಳಿಸಿದ್ದರು ಎನ್ನಲಾಗಿದೆ. ಕಲಾವತಿ ಗರ್ಭಿಣಿ ಆಗದ ಕಾರಣ, ಜತೆಗೆ ತಮ್ಮನ ಮಗಳೇ ಆಗಿರುವುದರಿಂದ ಆಕೆಯನ್ನು ಮತ್ತೊಬ್ಬ ಪುತ್ರನಿಗೆ ವಿವಾಹ ಮಾಡಿಕೊಳ್ಳಲು ಗುರು ತಾಯಿ ಚಿಕ್ಕೋಳಮ್ಮ ಪ್ರಯತ್ನಿಸಿದ್ದಾರೆ. ಆದರೆ, ಅದಕ್ಕೆ ಕಲಾವತಿ ವಿರೋಧಿಸಿದ್ದರಿಂದ ಕುಟುಂಬದಲ್ಲಿ ಅಶಾಂತಿ ಉಂಟಾಗಿದೆ. ಇದರಿಂದಾಗಿ ಮನೆಯಲ್ಲಿ ಗುರು ಹೆತ್ತವರು, ಸಹೋದರರು ಹಾಗೂ ಪತ್ನಿ ನಡುವೆ ಜಗಳ ಜೋರಾಗುತ್ತಿದೆ. ಮಡಿವಾಳ ಸಂಘಟನೆ ಮುಖಂಡರು ಬುಧವಾರ ಗುರು ಮನೆಗೆ ತೆರಳಿ, ಗಲಾಟೆ ಮಾಡಿಕೊಳ್ಳದೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹೇಳಿದ್ದಾರೆ. ಮತ್ತೊಂದೆಡೆ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರೂ ಸಿಎಂ ಕಾರ್ಯಕ್ರಮ ಮುಗಿದ ನಂತರ ಸಚಿವರ ಸಮ್ಮುಖದಲ್ಲಿ ನ್ಯಾಯಸಮ್ಮತವಾಗಿ ಹಣ ಹಂಚಿಕೆ ಮಾಡುವುದಾಗಿ ತಿಳಿಹೇಳಿದ್ದಾರೆ. ಹಣದಿಂದಾಗಿಯೇ ಕುಟುಂಬದಲ್ಲಿ ಅಶಾಂತಿ ಹೆಚ್ಚಾದ್ದರಿಂದ ಕಲಾವತಿ ಹೆತ್ತವರು ಆಕೆಯನ್ನು ತವರಿಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಒಟ್ಟಾರೆ ಹುತಾತ್ಮ ಯೋಧನ ಕುಟುಂಬದಲ್ಲೀಗ ಗಲಾಟೆ ಆರಂಭವಾಗಿದ್ದು, ಹಿರಿಯರು ಮಧ್ಯ ಪ್ರವೇಶಿಸಿ ಸರಿಪಡಿಸದಿದ್ದಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ ಎಂಬ ಆತಂಕ ಸಂಬಂಧಿಕರಿಂದ ವ್ಯಕ್ತವಾಗುತ್ತಿದೆ.

ಆರೋಪ ನಿರಾಕರಣೆ: ಎಲ್ಲ ಆರೋಪಗಳನ್ನು ನಿರಾಕರಿಸಿರುವ ಗುರು ಪತ್ನಿ ಕಲಾವತಿ, ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ದೂರು ನೀಡುತ್ತೇನೆ, ಸಾರ್ವಜನಿಕರ ಜತೆಗೂಡಿ ಚಳವಳಿ ನಡೆಸುತ್ತೇನೆ ಎಂದಿದ್ದಾರೆ.

ಅತ್ತೆ-ಸೊಸೆ ಜಗಳದಿಂದ ಬೇಸತ್ತಿದ್ದ ಗುರು

ಗುರುಗೆ ಇನ್ನೂ 2 ದಿನ ರಜೆ ಇತ್ತು. ಆದರೆ ಮನೆಯಲ್ಲಿ ಅತ್ತೆ-ಸೊಸೆ ಜಗಳ ಆಡಿದ್ದರಿಂದ ಬೇಸತ್ತ ಗುರು ಫೆ.12ರ ಬದಲಿಗೆ 10ರಂದೇ ವಾಪಸ್ ಹೊರಟಿದ್ದರು. 12ರಂದು ಹೊರಟಿದ್ದರೆ, 16ಕ್ಕೆ ಅಲ್ಲಿಗೆ ತಲುಪುತ್ತಿದ್ದರಿಂದ ಬದುಕಿ ಉಳಿದಿರುತ್ತಿದ್ದರು ಎನ್ನಲಾಗುತ್ತಿದೆ. ಪತಿ ಸಾವಿನ ಸುದ್ದಿ ನಂತರ ರೋದಿಸುತ್ತಿದ್ದ ಪತ್ನಿ ಕಲಾವತಿ ಅತ್ತೆಯ ವಿರುದ್ಧ ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನುತ್ತಾರೆ ಸ್ಥಳೀಯರು.