ಗುರುಗೆ ಪತ್ನಿಯನ್ನು ಉನ್ನತ ಸ್ಥಾನದಲ್ಲಿ ನೋಡುವಾಸೆ ಇತ್ತು!

| ಕೆ.ಎನ್.ರಾಘವೇಂದ್ರ ಮಂಡ್ಯ

ಗುಡಿಗೆರೆಯ ವೀರ ಯೋಧ ಎಚ್.ಗುರು ತನ್ನ ಪತ್ನಿ ಕಲಾವತಿ ಉನ್ನತ ಹುದ್ದೆ ಅಲಂಕರಿಸಬೇಕೆಂಬ ಆಸೆ ಹೊಂದಿದ್ದರು. ಅದಕ್ಕಾಗಿ ಮುಕ್ತ ವಿವಿಯಲ್ಲಿ ಎಂಎ ಓದಿಸುತ್ತಿದ್ದರು. ಕಲಾವತಿ ಪಿಯುಸಿ, ಪದವಿಯಲ್ಲಿ ಉತ್ತಮ ಅಂಕ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದುಕೊಂಡೇ ಓದುವಂತೆ ಆಕೆಯನ್ನು ಪ್ರೇರೇಪಿಸಿ ಎಂಎ ಕೋರ್ಸ್​ಗೆ ದಾಖಲು ಮಾಡಿಸಿದ್ದರು. ಆಕೆ ಆಸೆಯಂತೆ ಉಪನ್ಯಾಸಕಿಯನ್ನಾಗಿಸುವ ಹಂಬಲ ಹೊಂದಿದ್ದರು. ಈ ಬಗ್ಗೆ ನೆನಪಿಸಿಕೊಂಡ ಕಲಾವತಿ, ಚೆನ್ನಾಗಿ ಓದು. ಎಲ್ಲರಿಗೂ ಒಳ್ಳೆಯದಾಗುತ್ತೆ ಎನ್ನುತ್ತಿದ್ದರು. ಇತ್ತೀಚಿಗೆ ಮೊದಲ ವರ್ಷದ ಅಸೈನ್ಮೆಂಟ್ ಕೊಡಲು ಇಬ್ಬರು ಒಟ್ಟಿಗೆ ಹೋಗಿದ್ದೆವು. ಆದರೀಗ, ಅವರೇ ಇಲ್ಲ. ಯೋಧರನ್ನು ಕೊಂದ ಉಗ್ರರನ್ನು ಸದೆ ಬಡಿಯುವ ಅವಕಾಶಕ್ಕಾಗಿ ನಾನು ಸೇನೆಗೆ ಸೇರುತ್ತೇನೆ. ನನ್ನ ಗುರು ಕರ್ತವ್ಯವನ್ನು ನಾನು ಪೂರೈಸುತ್ತೇನೆ ಎಂದು ಕಣ್ಣೀರಿಟ್ಟರು.

ಜನ್ಮ ಸಾರ್ಥಕವಾಯ್ತು: ಮಗನ ಸಾವಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಗುರು ತಂದೆ ಹೊನ್ನಯ್ಯ, ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಇಂಥ ಮಗನನ್ನು ಪಡೆದು ನಮ್ಮ ಜನ್ಮ ಸಾರ್ಥಕವಾಯ್ತು. ನನಗೆ ಇನ್ನು ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಗಂಡು ಮಕ್ಕಳಾದರೆ ಸೈನ್ಯಕ್ಕೆ ಕಳುಹಿಸುತ್ತೇನೆ ಎಂದರು. ತಾಯಿ ಚಿಕ್ಕೊಳಮ್ಮ ಕೂಡ ಮೊಮ್ಮಕ್ಕಳನ್ನು ಸೇನೆಗೆ ಕಳುಹಿಸುತ್ತೇನೆ ಎಂದು ಹೇಳಿದರು.

ನಾನು ಸತ್ತೋದ್ರೆ ಏನ್ಮಾಡ್ತೀರಾ?: ಇಬ್ಬರು ಸಹೋದರರನ್ನು ಕಂಡರೆ ಗುರು ಅವರಿಗೆ ಅಪಾರ ಪ್ರೀತಿ. ಕೆಲಸಕ್ಕೆ ಸೇರಿದ ಬಳಿಕ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ತಂದೆ-ತಾಯಿಗೆ ತಿಳಿಯದಂತೆ ಸಹೋದರರಿಗೆ ಹಣ ಕೊಡುತ್ತಿದ್ದರು. ಸಹೋದರರ ಬಾಂಧವ್ಯದ ಬಗ್ಗೆ ಗುರು ತಮ್ಮ ಆನಂದ್ ಮಾತನಾಡಿ, ನಾನು ಮತ್ತು ಮಧು ಇಬ್ಬರೂ ಪರಸ್ಪರ ಜಗಳವಾಡಿಕೊಂಡಿದ್ದೆವು. ಆ ವೇಳೆ ನನ್ನ ತಲೆಗೆ ಏಟಾಗಿತ್ತು. ರಜೆಗೆಂದು ಮನೆಗೆ ಬಂದಿದ್ದ ಗುರು ನಮ್ಮ ಜಗಳ ನೋಡಿದ. ಏಟು ಬಿದ್ದಿದ್ದ ನನ್ನನ್ನು ತೊಡೆ ಮೇಲೆ ಮಲಗಿಸಿಕೊಂಡು ನಾನು ಬದುಕಿರುವಾಗಲೇ ಹೀಗೆ ಮಾಡ್ತೀರಾ. ಇನ್ನು ನಾನು ಹೊರ ಟೋದ್ರೆ ಏನ್ಮಾಡ್ತೀರಾ..? ನಿನ್ನನ್ನು ಒಂದು ಒಳ್ಳೆಯ ದಾರಿಗೆ ಸೇರಿಸಬೇಕು ಎಂದು ಹೇಳಿದ್ದನ್ನು ನೆನೆದು ಭಾವುಕರಾದರು.

ಕುಟುಂಬಕ್ಕೆ ಆರ್ಥಿಕ ನೆರವು

ಗುಡಿಗೆರೆಯಲ್ಲಿ ನೀರವ ಮೌನ ಆವರಿಸಿದ್ದು, ಗುರು ಅವರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ರಾಜ್ಯದ ವಿವಿಧೆಡೆಯಿಂದ ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಅಲ್ಲದೆ ಕೆಲವರು ಆರ್ಥಿಕ ನೆರವು ನಿಡುತ್ತಿದ್ದಾರೆ. ಚಿಕ್ಕಮಗಳೂರು ಜಿಪಂ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷ ಬಾಬಿಪತ್ತಾರ್ 78,401 ರೂ. ಗಳನ್ನು ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಿವಮೊಗ್ಗದಿಂದ ಆಗಮಿಸಿದ ಅಂಧ ಶಿಕ್ಷಕ ಜಿ.ಎಚ್.ಮಂಜುನಾಥ್ 2,500 ರೂ. ನೀಡಿದರು. ಬೆಲ್​ಬಾಟಮ್ ಚಿತ್ರ ನಿರ್ವಪಕ ಸಂತೋಷ್​ಕುಮಾರ್ 25 ಸಾವಿರ ರೂ., ನಟ ನಿರ್ದೇಶಕ ರಿಷಬ್​ಶೆಟ್ಟಿ 50 ಸಾವಿರ ರೂ. ನೆರವು ನೀಡಿದರು.

ಹುತಾತ್ಮ ಯೋಧರಿಗೆ ರಂಭಾಪುರಿ ಶ್ರೀ ಶ್ರದ್ಧಾಂಜಲಿ

ಬಾಳೆಹೊನ್ನೂರು: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಹೇಯ ಕೃತ್ಯ ಖಂಡಿಸಿ, ಅಗಲಿದ ವೀರಯೋಧರಿಗೆ ಮೌನಾಚರಣೆ ಮೂಲಕ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ದೇಶ ಸಂರಕ್ಷಣೆ ಮಾಡುತ್ತಿದ್ದ ವೀರ ಯೋಧರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು ಅಮಾನವೀಯ. ಭಾರತದ ಉದಾತ್ತ ನಿಲುವು ಹಾಗೂ ಮೃದು ಧೋರಣೆ ಅರ್ಥಮಾಡಿಕೊಳ್ಳದ ಉಗ್ರರು ಪದೇಪದೆ ಈ ರೀತಿಯ ಕೃತ್ಯ ನಡೆಸುತ್ತಿರುವುದನ್ನು ಪಕ್ಷಾತೀತವಾಗಿ ಎಲ್ಲ ಧರ್ಮದ ಜನರು ಸ್ಪಷ್ಟವಾಗಿ ಖಂಡಿಸಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡು ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು. ಈ ದಿಶೆಯಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ತಿಳಿಸಿದರು.

ಏರ್​ಲಿಫ್ಟ್ ಆರೋಪ ನಿರಾಕರಿಸಿದ ಗೃಹ ಇಲಾಖೆ

ಜಮ್ಮುವಿನಿಂದ ಶ್ರೀನಗರಕ್ಕೆ ಸಿಅರ್​ಪಿಎಫ್ ಹಾಗೂ ಬಿಎಸ್​ಎಫ್ ಯೋಧರನ್ನು ಏರ್​ಲಿಫ್ಟ್ ಮೂಲಕ ಕರೆತರುವುದಕ್ಕೆ ನಿರಾಕರಿಸಲಾಗಿತ್ತು ಎಂಬ ವರದಿಯನ್ನು ಗೃಹ ಇಲಾಖೆ ಅಲ್ಲಗೆಳೆದಿದೆ. ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿರಲಿಲ್ಲ. ಹೆಲಿಕಾಪ್ಟರ್ ಬಳ ಕೆಗೆ ಅನುಮತಿ ಬಗ್ಗೆ ಪತ್ರ ಬಂದಿರಲಿಲ್ಲ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.