ಅಳುವುದಕ್ಕಾದರೂ ಅನ್ನ ತಿನ್ನಿ ಎಂದು ಹುತಾತ್ಮ ಯೋಧನ ಕುಟುಂಬಸ್ಥರಲ್ಲಿ ಸಂಬಂಧಿಕರ ಮನವಿ

ಮಂಡ್ಯ: ಮಗ ಹುತಾತ್ಮನಾದನೆಂಬ ಸುದ್ದಿ ಕೇಳಿದಾಗಿನಿಂದ ಊಟ ಬಿಟ್ಟು ಗೋಳಾಡುತ್ತಿರುವ ಕುಟುಂಸ್ಥರ ಆರೈಕೆಗೆ ಒದ್ದಾಡುತ್ತಿರುವ ಸಂಬಂಧಿಗಳು, “ಅಳುವುದಕ್ಕಾದರೂ ಅನ್ನ ತಿನ್ನಿ,” ಎಂದು ಬಲವಂತ ಮಾಡುತ್ತಿದ್ದ ದೃಶ್ಯ ಅಲ್ಲಿ ಸೇರಿದ್ದ ಜನರ ಕಣ್ಣುಗಳಲ್ಲಿ ನೀರು ಬರುವಂತೆ ಮಾಡುತ್ತಿತ್ತು.

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಯೋಧರ ಮೇಲಿನ ಉಗ್ರರ ದಾಳಿಯಲ್ಲಿ ತಮ್ಮ ಮಗ ಹುತಾತ್ಮನಾಗಿದ್ದಾನೆ ಎಂಬ ಸುದ್ದಿ ತಿಳಿದಾಗಿನಿಂದ ಊಟ ಬಿಟ್ಟು ಕುಟುಂಬಸ್ಥರು ನರಳಾಡುತ್ತಿದ್ದಾರೆ. ಹಸಿದು ಬಳಲಿರುವ ಹುತಾತ್ಮ ಯೋಧನ ತಾಯಿಗೆ ಸಂಬಂಧಿಕರು ಬಲವಂತವಾಗಿ ಊಟ ಮಾಡಿಸಿದರು. ಊಟ ಮಾಡಲ್ಲ ಎಂದು ಹಠ ಹಿಡಿದ ತಾಯಿಯನ್ನು ಅಳುವುದಕ್ಕಾದರೂ ಶಕ್ತಿ ಬೇಕು ಊಟ ಮಾಡಿ ಎಂದು ಮನವಿ ಮಾಡಿದ ಮನಕಲಕುವ ಘಟನೆ ಯೋಧನ ಸ್ವಗ್ರಾಮವಾದ ಗುಡಿಗೆರೆಯ ಮನೆಯಲ್ಲಿ ನಡೆದಿದೆ.

ಪತಿ ಇಲ್ಲ ಎಂಬುದನ್ನು ಒಪ್ಪದ ಪತ್ನಿಯ ಮನಸ್ಸು
ತನ್ನ ಪತಿ ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಒಪ್ಪದ ಪತ್ನಿ, ಫೋಟೋಗೆ ಹೂ ಹಾಕಲು ಬಂದವರನ್ನು ತಡೆಯುತ್ತಿದ್ದಾರೆ. ಹೂವಿನ ಹಾರ ಹಾಕಲು ಮುಂದಾದ ಗೆಳೆಯರು ಹಾಗೂ ಸಂಬಂಧಿಕರನ್ನು ಹೂವು ಹಾಕಬೇಡಿ ಎಂದು ಅಳುತ್ತಾ ಗೋಳಾಡಿದ ಸನ್ನಿವೇಶ ನಡೆದಿದೆ. ಪತ್ನಿಯ ಬೇಡಿಕೆಗೆ ಮಣಿದು ಮನೆ ಮುಂದೆ ಫೋಟೋ ಇಡದೇ, ಹೂವಿನ ಹಾರ ಹಾಕದೆ ಬಂಧುಗಳು ಸುಮ್ಮನಾದರು. ಆಕೆಯ ಕಣ್ಣೀರಿಡುವುದನ್ನು ಕಂಡು ಸಂಬಂಧಿಕರು ಕಂಬಿನಿ ಮಿಡಿದರು. (ದಿಗ್ವಿಜಯ ನ್ಯೂಸ್​)