ತಕ್ಕಡಿ ಬಟ್ ಬಿದ್ದು ವಿದ್ಯಾರ್ಥಿನಿಗೆ ಗಾಯ

ಮಾದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಅವಘಡ
ಚಿಕಿತ್ಸೆ ಕೊಡಿಸಲು ಶಿಕ್ಷಕರ ನಿರ್ಲಕ್ಷೃ ಆರೋಪ
ಮಾನವೀಯತೆ ಮರೆತ ಗುರುಗಳ ವಿರುದ್ಧ ಆಕ್ರೋಶ

ಮದ್ದೂರು: ತಾಲೂಕಿನ ಮಾದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಕ್ಕಡಿ ಬಟ್ ಬಿದ್ದು ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ.
ಗ್ರಾಮದ ವಡ್ಡರ ಕಾಲನಿ ನಿವಾಸಿ ಶಶಿಕುಮಾರ್-ಭಾಗ್ಯ ದಂಪತಿ ಪುತ್ರಿ ಸಂಜನಾ ಗಾಯಗೊಂಡ ವಿದ್ಯಾರ್ಥಿನಿ.
7ನೇ ತರಗತಿ ವಿದ್ಯಾರ್ಥಿನಿಯಾದ ಈಕೆಯನ್ನು ಕಳೆದ ಬುಧವಾರ ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟಕ್ಕೆ ಅಕ್ಕಿ ತೂಕ ಮಾಡಲು ಕಳುಹಿಸಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ತೂಕದ ಬಟ್ ಸಂಜನಾಳ ಕಾಲಿನ ಮೇಲೆ ಬಿದ್ದಿದೆ. ಇದರಿಂದ ಕಾಲಿನ ಬೆರಳಿಗೆ ಗಾಯವಾಗಿ ಮೂಳೆ ಮುರಿದಿದೆ.
ಶಾಲೆ ಮುಗಿದ ಬಳಿಕ ಸಂಜೆ ಮನೆಗೆ ಬಂದ ಸಂಜನಾಳಿಗೆ ಪಾಲಕರು ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿಸಿದ್ದಾರೆ.
ಮಾನವೀಯತೆ ಮರೆತ ಶಿಕ್ಷಕರು: ವಿದ್ಯಾರ್ಥಿನಿ ಗಾಯಗೊಂಡಿರುವುದನ್ನು ಗಮನಿಸಿದ ಶಿಕ್ಷಕರು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಹಾಗೂ ಪಾಲಕರಿಗೆ ಮಾಹಿತಿ ನೀಡುವ ಕಾಳಜಿಯನ್ನು ವಹಿಸಿಲ್ಲ.
ಜತೆಗೆ ಬುಧವಾರದಿಂದ ಇಲ್ಲಿಯತನಕ ವಿದ್ಯಾರ್ಥಿನಿ ಶಾಲೆಗೆ ಬರಲು ಸಾಧ್ಯವಾಗದೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಶಾಲೆಗೆ ಬರುತ್ತಿಲ್ಲ ಎಂದು ತಿಳಿದಿದ್ದರೂ ಸೌಜನ್ಯಕ್ಕಾದರೂ ಮನೆಗೆ ಬಂದು ವಿದ್ಯಾರ್ಥಿನಿ ಆರೋಗ್ಯ ಬಗ್ಗೆ ವಿಚಾರಿಸಲಿಲ್ಲ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಅನ್ಯ ಕೆಲಸಗಳಿಗೆ ಬಳಸಿಕೊಳ್ಳಬಾರದು ಎಂಬ ನಿಯಮ ಇದ್ದರೂ ಬಳಸಿಕೊಂಡಿರುವುದು ತಪ್ಪು. ಗಾಯಗೊಂಡಿರುವ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸದೆ ನಿರ್ಲಕ್ಷೃ ವಹಿಸುವ ಮೂಲಕ ಮಾನವೀಯತೆ ಮರೆತಿರುವ ಶಿಕ್ಷಕರ ಕ್ರಮಕ್ಕೆ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅಕ್ಕಿ ತೂಕ ಮಾಡಲು ವಿದ್ಯಾರ್ಥಿನಿಯನ್ನು ಬಳಸಿಕೊಂಡಿರುವುದು ತಪ್ಪು. ತಕ್ಕಡಿ ಬಟ್ ಬಿದ್ದು ಕಾಲಿನ ಮೂಳೆ ಮುರಿದಿದ್ದರೂ ಚಿಕಿತ್ಸೆ ಕೊಡಿಸದಿರುವುದು ಅಪರಾಧ. ಮುಂದೆ ಹೀಗಾಗದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಮನ ಹರಿಸಬೇಕು.
ಸಿದ್ದಪ್ಪ ಎಸ್‌ಡಿಎಂಸಿ ಅಧ್ಯಕ್ಷ

ತಕ್ಕಡಿ ಬಟ್ ಬಿದ್ದು ವಿದ್ಯಾರ್ಥಿನಿ ಗಾಯಗೊಂಡಿರುವ ಕುರಿತು ಗುರುವಾರ ನನ್ನ ಗಮನಕ್ಕೆ ಬಂದಿದ್ದು, ಈ ಸಂಬಂಧ ಪರಿಶೀಲಿಸಲು ಕ್ಷೇತ್ರ ಸಮನ್ವಯಾಧಿಕಾರಿಯನ್ನು ನಿಯೋಜಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
ರೇಣುಕಮ್ಮ ಬಿಇಒ