ಸುಮಲತಾ ಅಂಬರೀಷ್​ರಿಂದ ಹೊಸ ಬಾಂಬ್: ಕುಟುಂಬದ ತೇಜೋವಧೆಗೆ ಆಮಿಷ ಆರೋಪ, ಯಾರಿಂದ ಈ ಕೃತ್ಯ?

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೆನ್ನಲ್ಲೇ ಟೀಕೆ, ವಾಗ್ದಾಳಿಗಳು ಕೂಡ ಮುಂದುವರಿದಿವೆ. ಈ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಅಂಬಿ ಕುಟುಂಬದ ವಿರುದ್ಧ ಕೆಟ್ಟದಾಗಿ ಹೇಳುವಂತೆ ನಮ್ಮ ನೌಕರರ ಮೇಲೆ ಒತ್ತಡ ಹೇರಲಾಗಿದೆ. ವಾರದೊಳಗೆ ಸುದ್ದಿಗೋಷ್ಠಿ ಮಾಡಿಸುವ ಸಾಧ್ಯತೆ ಇದೆ. ಆ ಕುಟುಂಬದವರೇ ನಮಗೆ ಮಾಹಿತಿ ನೀಡಿದ್ದಾರೆ. ಕೆಟ್ಟದಾಗಿ ಹೇಳಿದರೆ ವಿದೇಶಿ ಪ್ರವಾಸ, ಬೆಂಗಳೂರಿನಲ್ಲಿ ನಿವೇಶನ ಹಾಗೂ 10 ಲಕ್ಷ ರೂಪಾಯಿ ನಗದು ನೀಡುವ ಆಮಿಷವೊಡ್ಡಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ.

ನಮ್ಮ ಯಜಮಾನ(ಅಂಬರೀಷ್‌)ರ ಜತೆ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಆಮಿಷವೊಡ್ಡಲಾಗಿದೆ. ಇಷ್ಟೊಂದು ಕೆಟ್ಟ ರಾಜಕಾರಣವನ್ನು ನಾನು ನೋಡಿರಲಿಲ್ಲ. ಈಗ ನೋಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರಿನಿಂದ ಸುಮಲತಾ ಪ್ರಚಾರ ಆರಂಭಿಸಿದ್ದು, ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)