ನನಗೆ ಮತ ಹಾಕಿ ಸ್ವಾಭಿಮಾನ, ಅಭಿಮಾನ ಉಳಿಸಿ ಎಂದು ಸೆರಗೊಡ್ಡಿ ಯಾಚಿಸಿದ ಸುಮಲತಾ ಅಂಬರೀಷ್​

ಮಂಡ್ಯ: ಇಲ್ಲಿನ ಜನರು ಸ್ವಾಭಿಮಾನವನ್ನು ಉಳಿಸಿ, ಅಂಬರೀಷ್​ ಅವರ ಮೇಲಿನ ಅಭಿಮಾನವನ್ನು ಉಳಿಸಿ, ಈ ಮಣ್ಣಿನ ಸೊಸೆ ನಾನು ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಸೆರಗೊಡ್ಡಿ, ಕೈಮುಗಿದು ಮತಯಾಚನೆ ಮಾಡಿದರು.

ಇಂದು ಸಿಲ್ವರ್​ ಜುಬ್ಲಿ ಪಾರ್ಕ್​ನಲ್ಲಿ ನಡೆದ ಸ್ವಾಭಿಮಾನಿ ಸಮ್ಮಿಲನ ಬೃಹತ್​ ಸಮಾವೇಶದ ಕೊನೆಯಲ್ಲಿ ಮಾತನಾಡಿದ ಸುಮಲತಾ ಅಂಬರೀಷ್​, ಇಷ್ಟು ದಿನ ಪ್ರತಿಪಕ್ಷಗಳಿಂದ ಕೇಳಿದ ಮಾತುಗಳಿಗೆಲ್ಲ ತಿರುಗೇಟು ನೀಡುವ ಜತೆ ಅಂಬರೀಷ್​ ನೆನಪಲ್ಲಿ ಭಾವುಕರಾದರು. ಕೊಳಕು ಮಾತು, ಮನಸ್ಥಿತಿಗಳಿಗೆ ಉತ್ತರಿಸುವುದು ಬೇಡ. ಇನ್ನೇನು ಮಳೆಗಾಲ ಶುರುವಾಗುತ್ತದೆ. ಅಂಥ ಕೊಳಕು, ಕೆಸರುಗಳೆಲ್ಲ ತೊಡೆದುಹೋಗುತ್ತವೆ. ನನ್ನನ್ನು ಗೆಲ್ಲಿಸಿ ಈ ಮಂಡ್ಯಕ್ಕೆ ಅಗತ್ಯವಿರುವ ಕೆಲಸ ನಾನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ನಾನು ನಾಲ್ಕು ವಾರಗಳಲ್ಲಿ ಮಂಡ್ಯದಲ್ಲಿ ದೇವರನ್ನೇ ಕಂಡೆ. ನನ್ನ ಪತಿ ಅಂಬರೀಷ್​ ಸತ್ತಿಲ್ಲ. ನಿಮ್ಮೆಲ್ಲರ ನಡುವೆಯೇ ಇದ್ದಾರೆ ಎಂಬುದನ್ನು ನಾನು ಕಂಡೆ. ಸಾಕಷ್ಟು ನಿಂದನೆ ಕೇಳಿ ನುಂಗಿಕೊಂಡೆ. ನಾನು ಈ ಹೋರಾಟ ಶುರು ಮಾಡಿದಾಗ ಒಂಟಿಯಾಗಿದ್ದೆ. ಈಗ ಒಂಟಿಯಲ್ಲ. ಸಾವಿರಾರು ಜನರು, ಕಾರ್ಯಕರ್ತರು ನನಗೆ ಶಕ್ತಿ ತುಂಬಿದ್ದೀರಿ ಎಂದು ಹೇಳಿದರು.

ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಮತ ಹಾಕಿಸಿಕೊಂಡರು. ಆದರೆ ಮನ್ನಾ ಮಾಡಿಲ್ಲವೆಂದು ನನಗೆ ರೈತರೇ ಹೇಳಿದ್ದಾರೆ. ನಾವು ಕಾಂಗ್ರೆಸ್​ಗೆ ವೋಟು ಹಾಕಿದ್ದೇವೆಂದು ನಮ್ಮ ಊರಿನ ಕೆರೆ, ರಸ್ತೆ ಅಭಿವೃದ್ಧಿ ಮಾಡಿಲ್ಲವೆಂದೂ ಜನರು ತಿಳಿಸಿದ್ದಾರೆ. ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿದ ಭರವಸೆಯೂ ಸುಳ್ಳಾಗಿದೆ. ರೈತರು, ಮಹಿಳೆಯರು, ಸೈನಿಕರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಗೌರವ ಇಲ್ಲ ಎಂದು ಆರೋಪಿಸಿದರು.

ನಾನು ಯಾರು, ನಿಮ್ಮ ಸ್ನೇಹಿತನ ಪತ್ನಿ
ನಾನು ಚುನಾವಣೆಗೆ ನಿಂತಿದ್ದು ಅಷ್ಟೊಂದು ದೊಡ್ಡ ಅಪರಾಧವಾ? ನನ್ನನ್ನು ಅಷ್ಟೊಂದು ನಿಂದನೆ ಮಾಡಲು ಕಾರಣವೇನು ಎಂದು ಸುಮಲತಾ ಪ್ರಶ್ನಿಸಿದರು.

ಪ್ರಚಾರಕ್ಕೆ ಹೋದಲ್ಲೆಲ್ಲ ನಿಮ್ಮ ಅಭಿವೃದ್ಧಿ ಬಗ್ಗೆ ಮಾತನಾಡದೆ ನನ್ನ ಬಗ್ಗೆ ಮಾತನಾಡಿದ್ದೀರಿ. ನಾನು ಯಾರು? ನೀವು ಅಣ್ಣ ಎನ್ನುತ್ತಿದ್ದ ನಿಮ್ಮ ಸ್ನೇಹಿತನ ಹೆಂಡತಿ. ಸ್ನೇಹಕ್ಕೂ ನಿಮಗೆ ಗೌರವ ಇಲ್ಲ. 8 ಜನ ಶಾಸಕರು, ಸಚಿವರು, ಮುಖ್ಯಮಂತ್ರಿ, ಮಾಜಿ ಪ್ರಧಾನಿ ಸೇರಿಕೊಂಡು ನನ್ನ ಬಗ್ಗೆಯೇ ಯಾಕೆ ಮಾತನಾಡುತ್ತೀರಿ? ನಿಮಗೆ ಬೇರೆ ವಿಷಯವೇ ಇಲ್ಲವೆ ಎಂದರು.

ನಾನು ಅಳಲ್ಲ ಜನರ ಕಣ್ಣೀರು ಒರೆಸಲು ಬಂದಿದ್ದೇನೆ
ನಾನು ಅಳಲ್ಲ, ಅಳುವುದಕ್ಕೆ ಬಂದಿಲ್ಲ. ಜನರ ಕಣ್ಣೀರು ಒರೆಸಲು ಬಂದಿದ್ದೇನೆ. ಅವರೇನೂ ರಾಜರಲ್ಲ, ಜನರು ಗುಲಾಮರೂ ಇಲ್ಲ. ಮೋಸ, ಸುಳ್ಳು, ದ್ವೇಷ, ಮಾನ, ಮರ್ಯಾದೆ ಬಿಟ್ಟು ಚುನಾವಣೆ ಮಾಡಬೇಕು ಎಂದರು.

ಅಂಬರೀಷ್​ ಪಾರ್ಥಿವ ಶರೀರವನ್ನು ನಾನು ತಂದೆ ಎಂದು ಪದೇಪದೆ ಹೇಳುತ್ತಾರೆ. ನಾನಿಲ್ಲದಿದ್ದರೆ ಆಗುತ್ತಿರಲಿಲ್ಲ ಎನ್ನುತ್ತಾರೆ. ಅಂಬರೀಷ್​ ಅವರೇನು ಸಾಮಾನ್ಯ ವ್ಯಕ್ತಿನಾ? 45 ವರ್ಷ ಕಲಾ ಸೇವೆ ಮಾಡಿದವರು. ಮೂರು ಬಾರಿ ಸಂಸದರಾದವರು. ಅವರಿಗೆ ಅರ್ಹತೆ ಇಲ್ಲವಾ? ಅವರು ಮಾಡಿದ್ದರ ಬಗ್ಗೆ ನನಗೂ ಕೃತಜ್ಞತೆ ಇದೆ. ಹಾಗಂತ ಮತ್ತೆ ಮತ್ತೆ ಅದನ್ನೇ ನೆನಪಿಸಿ ನೋವು ಕೊಡುವುದು ಯಾಕೆ ಎಂದು ಭಾವುಕರಾಗಿ ನುಡಿದರು.

ಪಾರ್ಥಿವ ಶರೀರ ತಂದಿದ್ದಕ್ಕೆ ಮತ ಕೊಡಿ ಎಂದು ಅವರ ಅಭಿಮಾನಿಗಳ ಬಳಿ ಕೇಳುತ್ತೀರಾ? ಸಮಾಧಿ ಮೇಲೆ ನಿಂತು ರಾಜಕಾರಣ ಮಾಡುತ್ತೀರಾ? ನಾನು ಅಂದು ಅತ್ತಾಗ ನೋವಿತ್ತು. ಇಂದಿನ ಅಳುವಲ್ಲಿ ಶಕ್ತಿ ಇದೆ. ನಾನು ಪತಿಯನ್ನು ಕಳೆದುಕೊಂಡು ಕಣ್ಣೀರು ಹಾಕಿದರೆ ಡ್ರಾಮಾ ಎನ್ನುತ್ತಾರೆ. ಇವರು ವೇದಿಕೆ ಮೇಲೆ ಅತ್ತರೆ ನಿಜವಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದರ್ಶನ್- ಯಶ್​ ನನ್ನ ಮಕ್ಕಳು
ದರ್ಶನ್​ ಹಾಗೂ ಯಶ್​ ನಮ್ಮ ಮನೆ ಮಕ್ಕಳು. ಅವರು ನನ್ನ ಪರವಾಗಿ ಬಂದಿದ್ದಾರೆ. ನಿಮ್ಮ ಜತೆ ತಾತ, ಅಪ್ಪ, ಅಪ್ಪ. ಆಂಟಿ ಹೀಗೆ ಯಾರು ಬೇಕಾದರೂ ಬರಬಹುದು. ನನ್ನ ಪರ ನನ್ನ ಮಕ್ಕಳು ಬಂದರೆ ಅಪರಾಧಾನಾ ಎಂದು ಕೇಳಿದರು.

Leave a Reply

Your email address will not be published. Required fields are marked *