ತಲೆಗೆ ಹಸಿರು ಟವಲ್​ ಕಟ್ಕೊಂಡು ಅಮ್ಮನ ಚುನಾವಣಾ ಚಿಹ್ನೆ ಬಳಸಿ ರಣ ಕಹಳೆ ಮೊಳಗಿಸಿದ ಅಭಿ

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್​ ಅವರು ರೈತ ಕಹಳೆ ಊದುವ ರೈತನ ಚಿಹ್ನೆಯನ್ನು ಪಡೆದಿದ್ದು, ಪುತ್ರ ಅಭಿಷೇಕ್​ ಅದನ್ನು ಊದಿ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

ಶುಕ್ರವಾರ ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್​ ಸಭಾಂಗಣದಲ್ಲಿ ನಡೆದ ರೈತ ಸಂಘದ ಸಮಾವೇಶದಲ್ಲಿ ಭಾಗವಹಿಸಿದ್ದ ಅಭಿಷೇಕ್ ತಲೆಗೆ ಹಸಿರು ಟವಲ್ ಕಟ್ಟಿಕೊಂಡು ಕಹಳೆ ಊದಿದರು.

ಚಿಹ್ನೆ ಬಿಂಬಿಸುವ ಸಲುವಾಗಿ ಹಾಗೂ ರೈತ ಸಂಘದ ಕಾರ್ಯಕರ್ತರ ಒತ್ತಾಯದ ಮೇರೆಗೆ ಅಭಿಷೇಕ್​ ಕಹಳೆ ಊದಿ ಕಾರ್ಯಕರ್ತರು ಹಾಗೂ ರೈತ ಸಂಘದ ಸದಸ್ಯರಿಗೆ ಶಕ್ತಿ ತುಂಬಿದರು.

ಹಣ ಬೇಡವೆಂದ ಸುಮಲತಾ
ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ದೇವಸ್ಥಾನದಲ್ಲಿ ಸುಮಲತಾ ಪ್ರಚಾರ ಮಾಡುವ ವೇಳೆ ವ್ಯಕ್ತಿಯೊಬ್ಬ ವೀಳ್ಯದೆಲೆ ಮೇಲೆ 1000 ರೂ. ಹಣವಿಟ್ಟು ಕೊಡಲು ಬಂದಾಗ ನೀತಿ ಸಂಹಿತೆಯಿದೆ ಹಣ ಬೇಡವೆಂದು ಸುಮಲತಾ ಮತ್ತು ಬೆಂಬಲಿಗರು ನಿರಾಕರಿಸಿದರು. ಆದರೆ, ನಿನ್ನೆ ಕೆ.ಆರ್.ನಗರದ ದೊಡ್ಡಕೊಪ್ಪಲು ಗ್ರಾಮದಲ್ಲಿ ಪ್ರಚಾರದ ವೇಳೆ ನಿಖಿಲ್​ಗೆ ಗ್ರಾಮಸ್ಥನೊಬ್ಬ ಹಣ ನೀಡಿದ್ದರು. ಅದನ್ನು ನಿಖಿಲ್​ ಸ್ವೀಕರಿಸಿದ್ದರು. (ದಿಗ್ವಿಜಯ ನ್ಯೂಸ್​)