ಮಂಡ್ಯ: ದಿವಂಗತ ನಟ ಅಂಬರೀಷ್ ಅವರ ಅದೃಷ್ಟದ ಮನೆಗೆ ಪತ್ನಿ ಸುಮಲತಾ ಅಂಬರೀಷ್ ಭೇಟಿ ನೀಡಿ ಮನೆ ಬಾಡಿಗೆ ಪಡೆಯಲು ಮಾಲೀಕರೊಂದಿಗೆ ಚರ್ಚೆ ನಡೆಸಿದ್ದಾರೆ.
ಮಂಡ್ಯದ ಚಾಮುಂಡೇಶ್ವರಿನಗರದ 3ನೇ ಕ್ರಾಸ್ನಲ್ಲಿರುವ ಮನೆಗೆ ನಟಿ ಸುಮಲತಾ ಅವರು ನಿನ್ನೆ ಮಂಗಳವಾರ ರಾತ್ರಿ ಭೇಟಿ ನೀಡಿದ್ದಾರೆ. ಅಂಬರೀಷ್ ಅವರ ಪಾಲಿಗೆ ಈ ಮನೆ ಅದೃಷ್ಟದ ಮನೆಯೆಂದು ಕರೆಸಿಕೊಂಡಿದೆ. ಹೀಗಾಗಿ ಲೋಕಸಭಾ ಚುನಾವಣಾ ಕಣಕ್ಕೆ ಜಿಗಿದಿರುವ ಸುಮಲತಾ ಅವರು ಗೆಲುವಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ಈ ಮನೆಯನ್ನು ಬಾಡಿಗೆ ಪಡೆಯಲು ಮಾಲೀಕರೊಂದಿಗೆ ಚರ್ಚೆ ನಡೆಸಿದ್ದಾರೆ.
2008ರ ವಿಧಾನಸಭೆ ಹಾಗೂ 2009ರ ಲೋಕಸಭಾ ಎರಡು ಚುನಾವಣೆಯಲ್ಲಿ ಅಂಬರೀಷ್ ಅವರು ಸೋತಿದ್ದರು. 2013ರ ಚುನಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದಿದ್ದ ಅಂಬಿ, ಮನೆಗೆ ಬಂದ ಬಳಿಕ ಗೆದ್ದು ಸಚಿವರಾಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮನೆ ಖಾಲಿ ಮಾಡಿದ್ದರು.
ನಿನ್ನೆ ರಾತ್ರಿ ಮನೆಗೆ ಭೇಟಿ ನೀಡಿ ವೀಕ್ಷಿಸಿದ ಸುಮಲತಾ ಅವರಿಗೆ ಕಾಂಗ್ರೆಸ್ ನಾಯಕ ರಮೇಶ್ ಬಂಡಿಸಿದ್ದೇಗೌಡ ಸಾಥ್ ನೀಡಿದರು. ಮನೆ ಮಾಲೀಕ ಹರೀಶ್ ಕುಮಾರ್ ಜತೆ ಚರ್ಚೆ ನಡೆಸಿರುವ ಸುಮಲತಾಗೆ ಬಾಡಿಗೆ ನೀಡಲು ಒಪ್ಪಿದ್ದಾರೆ ಎಂದು ಹೇಳಲಾಗಿದೆ. (ದಿಗ್ವಿಜಯ ನ್ಯೂಸ್)