ಸುಮಲತಾ ಸುನಾಮಿ ತಡೆಗೆ ತಂತ್ರಗಾರಿಕೆ!

| ಮಾದರಹಳ್ಳಿ ರಾಜು ಮಂಡ್ಯ

ಲೋಕಸಭಾ ಚುನಾವಣೆ ಕಾವು ದಿನೇದಿನೆ ರಂಗೇರುತ್ತಿದ್ದು, ಸುಮಲತಾ ಅಂಬರೀಚ್ ಪರ ಎದ್ದಿರುವ ಸುನಾಮಿ ತಡೆಯಲು ಜೆಡಿಎಸ್ ನಾಯಕರು ತೆರೆಮರೆಯಲ್ಲಿ ತಂತ್ರಗಾರಿಕೆ ಆರಂಭಿಸಿದ್ದಾರೆ.

ಸುಮಲತಾ ಪರ ಬಹಿರಂಗವಾಗಿ ಅಖಾಡಕ್ಕಿ ಳಿದಿರುವ ಕಾಂಗ್ರೆಸಿಗರನ್ನು ಪ್ರತ್ಯೇಕವಾಗಿ ಸಂರ್ಪಸಿ ಮಾತುಕತೆ ನಡೆಸುವುದು, ಆಮಿಷ ಒಡ್ಡುವುದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಷ್​ರಿಂದಲೇ ನಮಗೆ ಅಡ್ಡಿಯಾಯಿತು ಎಂಬ ಅಂಶಗಳನ್ನು ಮುಂದಿಟ್ಟು ಕೊಂಡು ಮನವೊಲಿಕೆ ಮಾಡುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಅಂಬಿ ಆಪ್ತರನ್ನೇ ಇದಕ್ಕೆ ಗಾಳ ಮಾಡಿಕೊಳ್ಳಲು ತಂತ್ರಗಾರಿಕೆ ಹೆಣೆದಿದ್ದು, ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಂಬಿ ಜತೆ ಕಾಣಿಸಿಕೊಂಡವರನ್ನೇ ಮಾ.25ರಂದು ವೇದಿಕೆಗೆ ಕರೆತರುವ ಯತ್ನಗಳು ಜೋರಾಗಿ ನಡೆಯುತ್ತಿವೆ. ಜತೆಗೆ ಸುಮಲತಾ ಪರ ಬ್ಯಾಟಿಂಗ್ ಮಾಡುತ್ತಿರುವವರು, ಜಾಲತಾಣಗಳಲ್ಲಿ ಜೆಡಿಎಸ್ ನಾಯಕರನ್ನು ವಿರೋಧಿಸುತ್ತಿರುವವರ ಮಾಹಿತಿಯನ್ನು ಪೊಲೀಸರು ಹಾಗೂ ಜೆಡಿಎಸ್​ನ ಆಪ್ತ ಕಾರ್ಯಕರ್ತರ ಮೂಲಕ ಪತ್ತೆಹಚ್ಚಿ, ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಯಾವುದೇ ತೊಂದರೆಯಾಗಬಾರದು ಎಂಬ ಕಾರಣದಿಂದ ಜೆಡಿಎಸ್ ವಿರುದ್ಧ ಯಾರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೋ ಅಂಥವರ ಆತ್ಮೀಯರು, ಸಂಬಂಧಿಕರನ್ನು ಸೆಳೆಯುವ ಕೆಲಸ ಸದ್ದಿಲ್ಲದೆ ಸಾಗುತ್ತಿದೆ. ಇದಕ್ಕೆ ಬಗ್ಗದವರಿಗೆ ಚುನಾವಣೆ ನಂತರ ದೂರು ದಾಖಲಿಸುವ ಬೆದರಿಕೆಗಳೂ ಬರುತ್ತಿವೆ. ಈಗ ಪ್ರಕರಣ ದಾಖಲಿಸಿದರೆ ಅದರಿಂದ ತೊಂದರೆ ಆಗಬಹುದು. ಆದ್ದರಿಂದ ಚುನಾವಣೆ ಮುಗಿದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ಭಯ ಸೃಷ್ಟಿಯಾಗುವಂತೆ ಮಾಡುತ್ತಿದ್ದಾರೆ. ಈ ಕಾರಣದಿಂದ ಈಗಾಗಲೇ ಕೆಲವರು ತಣ್ಣಗಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಮರಾವತಿಗೆ ದಳ ಗಾಳ: ಅಂಬಿ ಪರಮಾಪ್ತ ಅಮರಾವತಿ ಚಂದ್ರಶೇಖರ್​ಗೆ ಜೆಡಿಎಸ್ ಗಾಳ ಹಾಕಿದ್ದು, ಮುಂದಿನ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿ.ಫಾರಂ ನೀಡುವ ಭರವಸೆ ನೀಡಿದೆ ಎನ್ನಲಾಗುತ್ತಿದೆ. ಅಧಿಕಾರದಲ್ಲಿರುವ ತನಕ ಅಂಬರೀಷ್​ಗೆ ಅಮರಾವತಿ ಮನೆಯೇ ಕಚೇರಿಯಾಗಿತ್ತು. ಇದರಿಂದಾಗಿ ಅಂಬಿ ಹೆಸರಿಗೆ ಕಳಂಕವೂ ಅಂಟಿತ್ತು. 2018ರ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಾಗ ಅಮರಾವತಿ ನನಗೆ ಬಿ ಫಾರಂ ಕೊಡಿಸುವಂತೆ ಕೋರಿದ್ದರು. ‘ನನಗೆ ಬೇಡ ಅಂದಮೇಲೆ ಯಾರಿಗೂ ಕೊಡಿ ಎಂದು ಕೇಳುವುದಿಲ್ಲ’ವೆಂದು ಅಂಬಿ ಘೋಷಿಸಿ, ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಮರಾವತಿ ಸಹೋದರರು ಅವರ ವಿರುದ್ಧ ಆಕ್ರೋಶಗೊಂಡಿದ್ದರು. ಅಂಬಿ ಮೃತಪಟ್ಟ ನಂತರ ಸುಮಲತಾ ಇವರನ್ನು ದೂರವಿಟ್ಟಿದ್ದರು.

ಕಡೇ ಎರಡು ದಿನದ ಆಟ

ಅಂಬಿ ಅಭಿಮಾನಿಗಳ ಅಬ್ಬರದಿಂದ ಸುಮಲತಾ ಬೆಂಬಲಿಗರ ಉತ್ಸಾಹ ಇಮ್ಮಡಿಗೊಂಡಿದೆ. ಅದಕ್ಕೆ ಜೆಡಿಎಸ್ ಕಾರ್ಯಕರ್ತರು ನೀಡುತ್ತಿರುವ ವ್ಯಾಖ್ಯಾನ ಬೇರೆಯದೇ ರೀತಿಯಲ್ಲಿದೆ. 15ರ ತನಕ ಅವರ ಅಬ್ಬರ. ಕಡೇ 2 ದಿನ ನಮ್ಮ ಅಬ್ಬರ ನಡೆಯು ತ್ತದೆ. ಚುನಾವಣೆ ಮಾಡುವುದು ನಮಗೆ ಗೊತ್ತಿದೆ. ಮತದಾರರನ್ನು ಹೇಗೆ ಬದಲಿಸಬೇಕೆಂಬ ವಿದ್ಯೆ ಕರಗತವಾಗಿದೆ ಎಂಬುದು ಜೆಡಿಎಸ್ ಕಾರ್ಯಕರ್ತರು ನೇರವಾಗಿಯೇ ಹೇಳುವ ಮಾತು. ಈ ನಿಟ್ಟಿನಲ್ಲಿ, ಈಗಾಗಲೇ ಅತ್ಯಾಪ್ತರ ಮೂಲಕ ಆರ್ಥಿಕ ಹಂಚಿಕೆಗೆ ಫಾರ್ವನು ಹೊರಡಿಸಲಾಗಿದೆ ಎಂಬ ಗುಸುಗುಸು ಕೇಳಿಬರುತ್ತಿದೆ.