ಕಾಂಗ್ರೆಸ್​, ಜೆಡಿಎಸ್​ ಯಾವುದಾದರೂ ಆಗಲಿ, ಅಂಬಿ ಪುತ್ರನೇ ಮಂಡ್ಯದ ಅಭ್ಯರ್ಥಿಯಾಗಲಿ !

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದ ಅಭ್ಯರ್ಥಿಗಾಗಿ ಈಗಾಗಲೇ ಹಗ್ಗಜಗ್ಗಾಟ ನಡೆಯುತ್ತಿದ್ದು ಈ ಬಾರಿ ಅಂಬರೀಷ್​ ಪುತ್ರ ಅಭಿಷೇಕ್ ಗೌಡ​ ಅವರಿಗೆ ಮಂಡ್ಯದಿಂದ ಟಿಕೆಟ್​ ನೀಡಬೇಕು ಎಂದು ಸ್ಥಳೀಯ ಕಾಂಗ್ರೆಸ್​ ನಾಯಕರು ಒತ್ತಾಯಿಸಿದ್ದಾರೆ.

ಒಂದು ವೇಳೆ ಲೋಕಸಭೆಯಲ್ಲಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಬೇಕೆಂದಾದರೆ, ಜೆಡಿಎಸ್​ನಿಂದಲೇ ಅಭಿಷೇಕ್​ ಅವರಿಗೆ ಟಿಕೆಟ್​ ನೀಡಲಿ. ಬದಲಿಗೆ ಸಿಎಂ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರಿಗೆ ಟಿಕೆಟ್​ ನೀಡಿದರೆ ನಾವು ವಿರೋಧಿಸುತ್ತೇವೆ ಎಂದಿದ್ದಾರೆ.

ಈ ರೀತಿ ಕಾಂಗ್ರೆಸ್​ ನಾಯಕರು ಶನಿವಾರ ನಡೆದ ಜಂಟಿ ಸುದ್ದಿಗೋಷ್ಠೀಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದ ಅಭ್ಯರ್ಥಿ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಸಂಸದರಾಗಿದ್ದ ಎಲ್.ಆರ್.ಶಿವರಾಮೇಗೌಡ ಅವರನ್ನು ಕೈಬಿಟ್ಟು ಜೆಡಿಎಸ್​ ನಿಖಿಲ್​ಗೆ ಮಣೆ ಹಾಕಲು ಹೊರಟಿದೆ. ಮಂಡ್ಯಕ್ಕೆ ಹೊರಗಿನ ನಿಖಿಲ್ ಅವಶ್ಯಕತೆ ಇಲ್ಲ. ಜೆಡಿಎಸ್​ನವರು ಜನ್ಮಭೂಮಿ ಹಾಸನ, ರಾಮನಗರ ಕರ್ಮ ಭೂಮಿ ಎನ್ನುತ್ತಿದ್ದರು. ಆದರೆ, ಈಗ ಸ್ವಾರ್ಥಕ್ಕಾಗಿ ಮಂಡ್ಯದಲ್ಲೂ ಕುಟುಂಬ ರಾಜಕಾರಣ ವಿಸ್ತರಿಸಲು ಮುಂದಾಗಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದ ಅವರು, ಕಾಂಗ್ರೆಸ್​ನಿಂದ ಅಂಬರೀಶ್ ಪುತ್ರ ಅಭಿಷೇಕ್​​​ರನ್ನೇ ಅಭ್ಯರ್ಥಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅರವಿಂದ್ ಕುಮಾರ್, ನಗರಸಭಾ ಸದಸ್ಯರಾದ ಟಿ.ಕೆ.ರಾಮಲಿಂಗಯ್ಯ, ನಹಿಮ್, ಮಾಜಿ ಸದಸ್ಯರಾದ ಅನಿಲ್ ಕುಮಾರ್, ಮಂಜುನಾಥ್, ಮಹೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *