ನಾವೇನು ಮೈಕ್​ ಮುಂದೆ ಟವಲ್​ ಹಾಕೊಂಡು ಅಳಬೇಕೆ? ನೀವಿರುವಾಗ ನಾವೇಕೆ ಅಳಬೇಕೆಂದು ಎದುರಾಳಿಗೆ ಟಾಂಗ್​ ಕೊಟ್ಟ ಅಭಿ

ಮಂಡ್ಯ: ಮುಖದಲ್ಲಿ ನೋವು ಕಾಣುತ್ತಿಲ್ಲವಂತೆ. ನಾವೇನು ಮೈಕ್​ ಮುಂದೆ ಟವಲ್​ ಹಾಕಿಕೊಂಡು ಅಳಬೇಕೆ? ನಾವು ಅಳುವುದಿಲ್ಲ. ನೀವಿರುವಾಗ ನಾವೇಕೆ ಅಳಬೇಕು? ಇದು ಅಂಬಿ ಪುತ್ರ ಅಭಿಷೇಕ್​ ಅಂಬರೀಷ್​ ಅವರು ಮೈತ್ರಿ ಪಕ್ಷದ ವಿರುದ್ಧ ಬಿಟ್ಟ ವಾಗ್ಬಾಣಗಳು.

ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ತಾಯಿ ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ನೇರ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕೆ ಆಗುವುದಿಲ್ಲ ಎಂಬುದು ಅವರಿಗೆ ಅರ್ಥ ಆಗಿದೆ. ಅದಕ್ಕಾಗಿ ಮೂರು ಜನ ಸುಮಲತಾ ಅವರನ್ನು ನಿಲ್ಲಿಸಿದ್ದಾರೆ. ಏನೇನೋ ಗಿಮಿಕ್​ಗಳನ್ನು ಮಾಡುತ್ತಿದ್ದಾರೆ. ನಾವು ದಡ್ಡರಲ್ಲ ಎಂದು ಏಪ್ರಿಲ್​ 18ಕ್ಕೆ ತೋರಿಸೋಣ ಎಂದು ಮತದಾರರಿಗೆ ಕರೆ ನೀಡಿದರು.

ನಾವು ದುಡ್ಡು ಖರ್ಚು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ನಾವು ದುಡ್ಡು ಹಂಚಿಲ್ಲ. ಬದಲಾಗಿ ಪ್ರೀತಿ ಹಂಚುತ್ತೇವೆ ಎಂದು ಹೇಳಿದ ಅಭಿಷೇಕ್​ ಅವರು ಏನೇನೋ ಡವ್ ಮಾಡಿದ್ದಾರೆ. ಅದೆಲ್ಲವನ್ನು ನಿಮ್ಮ ಗಮನಕ್ಕೆ ತೆಗೆದುಕೊಂಡು ಹೆಸರು ಮತ್ತು ಚಿಹ್ನೆಯನ್ನು ನೋಡಿ ವೋಟ್ ಮಾಡಬೇಕು. ಸ್ತ್ರೀ ಶಕ್ತಿ ಏನು ಎಂದು ಅವರಿಗೆ ನೀವು ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ನಾನು ಮಂಡ್ಯದ ಅಳಿಯ ಅಲ್ಲ, ಮಂಡ್ಯದ ಮಗ. ನಾನು ನಿನ್ನೆ, ಮೊನ್ನೆ ಬಂದಿಲ್ಲ. ಮದುವೆ ಆಗಿ ಮಂಡ್ಯದವನೂ ಆಗಬೇಕಾಗಿಲ್ಲ ಎಂದು ನಿಖಿಲ್​ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅಭಿಷೇಕ್ ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿದರೆ ಅಂಬರೀಷಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ಸಚಿವ ಡಿ.ಕೆ. ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿ ಇದು ಯಾವ ಲೆಕ್ಕಾಚಾರ ಎಂದು ನನಗೆ ಗೊತ್ತಾಗುತ್ತಿಲ್ಲ. ಅವರು ಹೇಳಿದರು ಎಂದು ನೀವು ನಂಬುತೀರಾ? ಅವರು ಇಷ್ಟ ಬಂದ ಹಾಗೆ ಮಾತಾಡಿಕೊಳ್ಳಲಿ, ಆರೋಪ ಮಾಡಿಕೊಳ್ಳಲಿ, ಅದನ್ನು ನೀವು ನಂಬಬೇಡಿ. ನಮ್ಮ ತಾಯಿಗೆ ಆಶೀರ್ವಾದ ಮಾಡಿ, ನಮಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್​)